ಚಿಕ್ಕೋಡಿ/ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ ಮಳೆ ಪ್ರಮಾಣ ಕೊಂಚ ತಗ್ಗಿದ್ದು, ನದಿಗಳಲ್ಲಿನ ನೀರಿನ ಮಟ್ಟ ಏರಿಕೆ ಕಡಿಮೆ ಆಗಿಲ್ಲ.
ಕೃಷ್ಣಾ ನದಿಗೆ 1.26 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆಯಿಂದ ಗೋಡೆ ಬಿದ್ದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ವೇದಗಂಗಾ, ದೂಧಗಂಗಾದಿಂದ 27,280 ಕ್ಯೂಸೆಕ್, ರಾಜಾಪುರ ಬ್ಯಾರೇಜ್‌ನಿಂದ 99,417 ಕ್ಯೂಸೆಕ್ ಸೇರಿ ಕೃಷ್ಣಾ ನದಿಗೆ ಒಟ್ಟು 1,26,697 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂಗಾಗಿ ಚಿಕ್ಕೋಡಿ, ಕಾಗವಾಡ, ಅಥಣಿ ತಾಲೂಕಿನಲ್ಲಿ ನದಿ ದಡದ ಗ್ರಾಮಗಳಲ್ಲಿ ಪ್ರವಾಹ ಆತಂಕ ಉಂಟಾಗಿದೆ. ವೇದಗಂಗಾ ನದಿಯ ಭೋಜವಾಡಿ-ಕುನ್ನೂರ, ಜತ್ರಾಟ-ಭಿವಸಿ, ಮಮದಾಪುರ-ಹುನ್ನರಗಿ, ಕುನ್ನುರ-ಬಾರವಾಡ ಮತ್ತು ಅಕ್ಕೋಳ-ಸಿದ್ನಾಳ ಮತ್ತು ದೂಧಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತ್ತವಾಡ ಬ್ಯಾರೇಜ್ ಮತ್ತು ಕಷ್ಣಾ ನದಿಯಕಲ್ಲೋಳ-ಯಡೂರ ಬ್ಯಾರೇಜ್ ಮುಳುಗಡೆಯಾಗಿ, ಸಂಚಾರ ಸ್ಥಗಿತಗೊಂಡಿದೆ. ದೂದಗಂಗಾ ನದಿಯ ಸದಲಗಾ-ಬೋರಗಾಂವ ಮತ್ತು ಯಕ್ಸಂಬಾ-ದಾನವಾಡ ಸೇತುವೆ ಮುಳುಗಡೆ ಹಂತ ತಲುಪಿವೆ. ಮಹಾರಾಷ್ಟ್ರದ ಕೊಯ್ನ ಮತ್ತಿತರ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ ಹಾಗೂ ನೀರು ಬಿಡುಗಡೆ ಕುರಿತು ನಿರಂತರ ಮಾಹಿತಿ ಒದಗಿಸುವುದಕ್ಕಾಗಿ ಬೆಳಗಾವಿ ಜಿಲ್ಲೆಯ ನೀರಾವರಿ ಇಲಾಖೆಯ ಇಂಜಿನಿಯರ್ ಒಬ್ಬರನ್ನು ನಿಯೋಜಿಸಲಾಗಿದೆ. ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ ನಗರ, ಬೆಳಗಾವಿ ಮತ್ತು ಖಾನಾಪುರ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶುಕ್ರವಾರ ಮತ್ತು ಶನಿವಾರ ರಜೆ ಘೋಷಿಸಲಾಗಿದೆ ಎಂದು ಡಿಸಿ ನಿತೇಶ ಪಾಟೀಲ ತಿಳಿಸಿದ್ದಾರೆ.