ಶಿವಮೊಗ್ಗ: ನಗರದಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಭಾರೀ ಮಳೆಯಿಂದ ಗೋಪಾಳಗೌಡ ಬಡಾವಣೆ ಸೇರಿ ಹಲವೆಡೆ ನಾಲೆಗಳು ಭರ್ತಿಯಾಗಿ ಮನೆಗಳಿಗೆ ನೀರು ನುಗ್ಗಿ ಆತಂಕ ಸೃಷ್ಟಿಸಿತ್ತು.
ಮುಕ್ಕಾಲು ಗಂಟೆಗೂ ಅಧಿಕ ವೇಳೆ ಎಡಬಿಡದೆ ಸುರಿದ ಮಳೆಯಿಂದ ಚರಂಡಿಗಳು ಭರ್ತಿಯಾಗಿ ರಸ್ತೆಗಳ ಮೇಲೆ ನೀರು ಹರಿಯಿತು. ಇದರಿಂದ ಹಲವು ರಸ್ತೆಗಳು ಜಲಾವೃತಗೊಂಡಿದ್ದವು. ಗೋಪಾಳದ ಕೃಷ್ಣಮಠ ರಸ್ತೆ ‘ಎ’ ಬ್ಲಾಕ್, ಗೋಪಾಳಗೌಡ ಬಡಾವಣೆ ಸೇರಿ ಹಲವಡೆ ನಾಲೆಗಳು ತುಂಬಿ ಹರಿದು ಹಲವು ಮನೆಗಳಿಗೆ ನೀರು ನುಗ್ಗಿತ್ತು. ಬೆಳಗ್ಗೆಯಿಂದ ಬಿಡುವು ನೀಡಿದ್ದ ಮಳೆ ಮಧ್ಯಾಹ್ನ ಏಕಾಏಕಿ ಸರಿದಿದ್ದರಿಂದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಉಂಟಾಯಿತು.
ಜಲಾಶಯಗಳಿಗೆ ತಗ್ಗಿದ ಒಳಹರಿವು: ಕಳೆದೆರಡು ದಿನಗಳಿಂದ ಶರಾವತಿ ಕಣಿವೆ, ಕೊಪ್ಪ, ಶೃಂಗೇರಿ ಭಾಗದಲ್ಲಿ ಸುರಿಯುತ್ತಿದ್ದ ಜಲಾಶಯಗಳಿಗೂ ನೀರಿನ ಒಳಹರಿವು ಹೆಚ್ಚಿತ್ತು. ಆದರೆ ಭಾನುವಾರ ಮಳೆ ಕಡಿಮೆ ಆಗಿದ್ದರಿಂದ ಜಲಾಶಯಗಳಿಗೆ ನೀರಿನ ಒಳಹರಿವಿನ ಪ್ರಮಾಣವೂ ತಗ್ಗಿತ್ತು.
ಶನಿವಾರವಷ್ಟೇ ಲಿಂಗನಮಕ್ಕಿ ಜಲಾಶಯಕ್ಕೆ 24 ಸಾವಿರಕ್ಕೂ ಅಧಿಕ ಕ್ಯೂಸೆಕ್ ಇದ್ದ ನೀರಿನ ಒಳಹರಿವು ಭಾನುವಾರ 14,326ಕ್ಕೆ ತಗ್ಗಿತ್ತು. 3,537.30 ಕ್ಯೂಸೆಕ್ ನೀರನ್ನು ಡ್ಯಾಂನಿಂದ ನದಿಗೆ ಬಿಡಲಾಯಿತು. ಭದ್ರಾ ಜಲಾಶಯಕ್ಕೆ 10,302 ಕ್ಯೂಸೆಕ್ ನೀರಿನ ಒಳಹರಿವಿದ್ದರೆ 175 ಕ್ಯೂಸೆಕ್ ನೀರನ್ನು ಹೊರಬಿಡಲಾಯಿತು.
ಇನ್ನೂ ಈಗಾಗಲೇ ಭರ್ತಿಯಾಗಿ ತುಂಗಾ ಜಲಾಶಯಕ್ಕೆ ನೀರಿನ ಒಳಹರಿವು ಮತ್ತಷ್ಟು ಹೆಚ್ಚಿತ್ತು. 24,796 ಕ್ಯೂಸೆಕ್ ನೀರಿನ ಒಳಹರಿವಿದ್ದು, ಅಷ್ಟೇ ಪ್ರಮಾಣದ ನೀರನ್ನು ತುಂಗಾ ನದಿಗೆ ಹರಿಬಿಡಲಾಯಿತು.