ಮಳವಳ್ಳಿ: ಪಟ್ಟಣದ ತಾಲೂಕು ಆಡಳಿತ ಸೇರಿದಂತೆ ತಾಲೂಕಿನಲ್ಲೆಡೆ ಸೋಮವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದ ವೃತ್ತದ ಬದಿಯಲ್ಲಿರುವ ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ತಹಸೀಲ್ದಾರ್ ಡಾ.ಲೋಕೇಶ್ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಬಾಬಾ ಸಾಹೇಬರನ್ನು ಸ್ಮರಿಸಲಾಯಿತು. ತಾಪಂ ಇಒ ಶ್ರೀನಿವಾಸ್, ಬಿಇಒ ಉಮಾ, ಸಮಾಜ ಕಲ್ಯಾಣಾಧಿಕಾರಿ ಸಂತೋಷ್, ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಂಜಯ್ ಇತರರಿದ್ದರು.
ಸಂಜೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಆಗಮಿಸಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದ ನಂತರ ತಾಲೂಕು ಪಂಚಾಯಿತಿ ಬಳಿ ಬೆಳ್ಳಿ ಸಾರೋಟಿನಲ್ಲಿ ಇರಿಸಲಾಗಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿವಿಧ ಭಾಷೆ ಹಾಗೂ ಸರ್ವಧರ್ಮವನ್ನು ಒಳಗೊಂಡಿರುವ ಭಾರತ ದೇಶಕ್ಕೆ ಇಡೀ ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ನೀಡುವ ಮೂಲಕ ಅಂಬೇಡ್ಕರ್ ಅವರು ವಿಶ್ವ ಮಾನವ ಎನಿಸಿಕೊಂಡಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ದೊಡ್ಡಯ್ಯ, ಮನ್‌ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಷ್, ಮುಖಂಡರಾದ ವಕೀಲ ಜಗದೀಶ್, ಚೇತನ್ ನಾಯಕ್, ದಿಲೀಪ್‌ಕುಮಾರ್, ದ್ಯಾಪೇಗೌಡ, ನಂಜುಂಡಸ್ವಾಮಿ, ಶಿವಮಾದೇಗೌಡ, ರವಿ, ಪೂರಿಗಾಲಿ ಜಯರಾಜು, ಪ್ರಭುಸ್ವಾಮಿ, ಸಂತೋಷ್ ಸೇರಿದಂತೆ ಇತರರಿದ್ದರು.