ಜಿಲ್ಲೆ

ಮಳವಳ್ಳಿಗೆ ಸಾರಿಗೆ ಬಸ್ ಸಂಚಾರ ಆರಂಭಿಸಿ

ತಿ.ನರಸೀಪುರ: ತಾಲೂಕಿನ ಮುಡುಕನಪುರ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಹಾಗೂ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಮೈಸೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಎಚ್.ಟಿ.ವೀರೇಶ್ ಅವರಿಗೆ ಮನವಿ ಸಲ್ಲಿಸಿದರು.

ಸಾರಿಗೆ ನಿಗಮದ ಕಚೇರಿಯಲ್ಲಿ ಬುಧವಾರ ಎಚ್.ಟಿ.ವೀರೇಶ್ ಅವರನ್ನು ಭೇಟಿಯಾಗಿ ಸೋಸಲೆ ಹೋಬಳಿಯ ಮುಡುಕನಪುರ ಗ್ರಾಮದ ಮಾರ್ಗವಾಗಿ ತಿ.ನರಸೀಪುರದಿಂದ ಮಳವಳ್ಳಿಗೆ ತೆರಳಲು ಅನುಕೂಲವಾಗುವಂತೆ ಸಾರಿಗೆ ಬಸ್‌ಗಳ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಕಬ್ಬು ಬೆಳೆಗಾರರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಮಲ್ಲೇಶ್ ಮಾತನಾಡಿ, ಸುಸಜ್ಜಿತವಾದ ರಸ್ತೆ ನಿರ್ಮಾಣವಾಗಿದ್ದರೂ ಸಾರಿಗೆ ಸೌಲಭ್ಯವೇ ಇಲ್ಲದ್ದರಿಂದ ಈ ಭಾಗದ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ರೋಗಿಗಳು, ವೃದ್ಧರು ಆಸ್ಪತ್ರೆಗಳಿಗೆ ಹೋಗಿ ಬರಲು ಪರದಾಡುವಂತಾಗಿದೆ. ನಿಗಮದ ಅಧಿಕಾರಿಗಳು ತುರ್ತಾಗಿ ಕ್ರಮಕೈಗೊಂಡು ಮುಡುಕನಪುರ ಮಾರ್ಗವಾಗಿ ತಿ.ನರಸೀಪುರದಿಂದ ಮಳವಳ್ಳಿಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ, ಮುಡುಕನಪುರ ಮಾರ್ಗವಾಗಿ ಬಸ್ ಸಂಚಾರ ಆರಂಭಗೊಂಡರೆ ಬೆನಕನಹಳ್ಳಿ, ಮುಸುವಿನಕೊಪ್ಪಲು, ಮೇಗಡಹಳ್ಳಿ, ಕೆಬ್ಬೆಹುಂಡಿ, ಕೈಯಂಬಳ್ಳಿ, ಕಾರ್ಗಳ್ಳಿ, ಕೃಷ್ಣಾಪುರ, ದೊಡ್ಡಬಾಗಿಲು, ಹಲವಾರ, ಮುಡುಕನಪುರ, ಚಿದರವಳ್ಳಿ, ಎಸ್.ದೊಡ್ಡಮರ, ಕೆಂಪನಪುರ, ಹಣಕೊಳ ಗೇಟ್, ರಾಮೇಗೌಡನಪುರ, ನೆಲ್ಲಿಗೆರೆ, ಅವೆರಹಳ್ಳಿ, ಶನೇಶ್ವರ ದೇವಸ್ಥಾನ, ವಡಕೆಪುರ, ಹಂಗ್ರಾಪುರ, ರಾಗಿಬೊಮ್ಮನಹಳ್ಳಿ ಹಾಗೂ ಹುಚ್ಚನದೊಡ್ಡಿ ಗೇಟ್ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜು, ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಮುಖಂಡರಾದ ಹ್ಯಾಕನೂರು ರಾಜೇಶ್, ಕರೋಹಟ್ಟಿ ಉಮೇಶ, ರಾಮಮೂರ್ತಿ, ತಲಕಾಡು ಚಂದ್ರಮ್ಮ, ಮಮತಾ, ಸಂಜನಾ ಇದ್ದರು.