ಜಿಲ್ಲೆ

ಮಲ್ಲಪ್ಪನಬೆಟ್ಟದ ತಪ್ಪಲಿನಲ್ಲಿ ಪೊಲೀಸ್ ಚೌಕಿ.!

ಹಾಸನ: ತಾಲೂಕಿನ ಶಾಂತಿಗ್ರಾಮ ಹೋಬಳಿ ಮಲ್ಲಪ್ಪನಬೆಟ್ಟ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಗಾಗಿ ಬೆಟ್ಟ ಪ್ರದೇಶದಲ್ಲಿರುವ ಬಿಜೇಮಾರನಹಳ್ಳಿಯಲ್ಲಿ ನೂತನ ಪೊಲೀಸ್ ಚೌಕಿ ನಿರ್ಮಿಸಲಾಗಿದೆ.


ಮಲ್ಲಪ್ಪನಬೆಟ್ಟ ಚನ್ನರಾಯಪಟ್ಟಣ ಅರಣ್ಯ ವಲಯ ವ್ಯಾಪ್ತಿಗೆ ಸೇರಿರುವ 722 ಎಕರೆ ಪ್ರದೇಶವಾಗಿದೆ. ಪೂರ್ವಕ್ಕೆ ಚನ್ನರಾಯಪಟ್ಟಣ ತಾಲೂಕು, ಪಶ್ಚಿಮಕ್ಕೆ ಹಾಸನ ತಾಲೂಕು ಮತ್ತು ದಕ್ಷಿಣಕ್ಕೆ ಹೊಳೆನರಸೀಪುರ ತಾಲೂಕು ಗಡಿಗಳು ಸಂಧಿಸುವ ಪ್ರದೇಶ ಇದಾಗಿದ್ದು, ಈ ಪ್ರದೇಶದಲ್ಲಿ ಶಾಂತಿಗ್ರಾಮದಿಂದ ಚನ್ನರಾಯಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಶೆಟ್ಟಿಗೌಡನಹಳ್ಳಿ ರಸ್ತೆ ಇದೆ.


ಈ ಪ್ರದೇಶ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ, ಹೊಳೆನರಸೀಪುರ ಟೌನ್ ಠಾಣೆ ಮತ್ತು ಶಾಂತಿಗ್ರಾಮ ಠಾಣೆಗಳಿಂದ 20 ಕಿ.ಮೀ. ದೂರದಲ್ಲಿರುವುದರಿಂದ ಯಾವುದೇ ಠಾಣೆಗಳ ಪೊಲೀಸ್ ಗಸ್ತಿನ ಭಯವಿಲ್ಲದೆ ಖದೀಮರ ಕಾನೂನುಬಾಹಿರ ಕೃತ್ಯಗಳ ತಾಣ ಎನಿಸಿತ್ತು. ನಿರ್ಜನ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರರನ್ನು ಅಡ್ಡಗಟ್ಟೆ ದರೋಡೆ ನಡೆಸುವ ಪ್ರಕರಣಗಳು ವರದಿ ಆಗುತ್ತಿದ್ದವು.


ಈ ಕಾರಣಕ್ಕೆ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಭಯದ ವಾತಾವರಣ ಮೂಡಿತ್ತು. ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿದ ಹಾಸನ ಉಪ ವಿಭಾಗದ ಡಿವೈಎಸ್ಪಿ ಜಿ ವಿ. ಉದಯ ಭಾಸ್ಕರ್ ಅವರು, ಗ್ರಾಮಸ್ಥರು, ಸ್ಥಳೀಯ ಅರಣ್ಯ ಕಾವಲುಗಾರರೊಂದಿಗೆ ಚರ್ಚೆ ನಡೆಸಿ ಈ ಭಾಗದಲ್ಲಿ ಭದ್ರತಾ ವ್ಯವಸ್ಥೆ ಮತ್ತು ಪೊಲೀಸ್ ಸಿಬ್ಬಂದಿಗೆ ಅನುಕೂಲವಾಗಲೆಂದು ಪೊಲೀಸ್ ಚೌಕಿ ನಿರ್ಮಿಸಲು ನಿರ್ಧರಿಸಿದ್ದರು.

ಹಲವರ ಸಹಕಾರದಿಂದ ಯಶಸ್ವಿ:ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಪ್ರೋತ್ಸಾಹ ಹಾಗೂ ಶಾಂತಿಗ್ರಾಮ ಪೊಲೀಸ್ ತಂಡ, ಬಿಜೇಮಾರನಹಳ್ಳಿ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಸಹಯೋಗದೊಂದಿಗೆ ಮಲ್ಲೇಶ್ವರಸ್ವಾಮಿ ದೇವರು ನೆಲೆಸಿರುವ ಮಲ್ಲಪ್ಪನಬೆಟ್ಟದ ತಪ್ಪಲಿನ ಬಿಜೇಮಾರನಹಳ್ಳಿಯಲ್ಲಿ ಹೊಸ ಪೊಲೀಸ್ ಚೌಕಿ ತಲೆ ಎತ್ತಿದ್ದು, ಸೋಮವಾರದಿಂದ ಕಾರ್ಯಾರಂಭ ಮಾಡಿದೆ. ‘‘ಈ ಪ್ರದೇಶದಲ್ಲಿ ಕೆಲ ದರೋಡೆ ಪ್ರಕರಣ ನಡೆದಿದ್ದವು. ಮೂರು ಪೊಲೀಸ್ ಠಾಣೆಗಳಿಗೂ ಈ ಜಾಗ ದೂರ ಇರುವುದರಿಂದ ಇಲ್ಲಿ ಅನೈತಿಕ ಚಟುವಟಿಕೆ ನಡೆಸುವವರಿಗೆ ಪೊಲೀಸರ ಭಯ ಇರಲಿಲ್ಲ. ಹೀಗಾಗಿ ಹಲವರ ಸಹಕಾರದೊಂದಿಗೆ ಇಲ್ಲಿ ಪೊಲೀಸ್ ಚೌಕಿ ನಿರ್ಮಿಸಲಾಗಿದೆ. ಅಲ್ಲದೆ ಮಲ್ಲೇಶ್ವರಸ್ವಾಮಿ ದೇವಸ್ಥಾನ ಸಹ ಇರುವುದರಿಂದ ಈ ಪ್ರದೇಶದ ಅಭಿವೃದ್ಧಿ ದೃಷ್ಟಿಯಿಂದಲೂ ಪೊಲೀಸ್ ಚೌಕಿ ಇಲ್ಲಿ ಅಗತ್ಯವಾಗಿತ್ತು.’’ ಹರಿರಾಮ್ ಶಂಕರ್, ಎಸ್ಪಿ, ಹಾಸನ.