ಜಿಲ್ಲೆ

ಮಲ್ಲಪ್ಪ ಬಡಾವಣೆಯಲ್ಲಿ ಹದಗೆಟ್ಟಿವೆ ರಸ್ತೆ, ಚರಂಡಿ ಅವ್ಯವಸ್ಥೆ ಹೇಳತೀರದು ಕಸ ವಿಲೇಗೂ ನಗರಸಭೆ ನಿರ್ಲಕ್ಷ್ಯ

ನೆಲಮಂಗಲ: ನಗರಸಭೆ ವ್ಯಾಪ್ತಿಯ ರೇಣುಕಾ ನಗರದ ಮಲ್ಲಪ್ಪ ಬಡಾವಣೆ ಮುಖ್ಯರಸ್ತೆಯಿಂದ 5ನೇ ಅಡ್ಡರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಚರಂಡಿ ದುರಸ್ತಿ ಆಗದಿರುವುದು ಸಂಚಾರಕ್ಕೆ ತೊಂದರೆಯಾಗಿದೆ.

ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿವೆ. ಚರಂಡಿ ಅವ್ಯವಸ್ಥೆ ಹೇಳ ತೀರದಾಗಿದೆ. ತ್ಯಾಜ್ಯ ನೀರು ಹರಿಯದ ಪರಿಣಾಮ ಸ್ಥಳೀಯರು ಸಾಂಕ್ರಾಮಿಕ ಭೀತಿ ಜತೆಗೆ ದುರ್ನಾತದಿಂದ ಬಸವಳಿಯುವಂತಾಗಿದೆ.

ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಬಡಾವಣೆ ನಿವಾಸಿಗಳು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ರೇಣುಕಾನಗರದ ಮುಖ್ಯರಸ್ತೆಯಿಂದ ಮಲ್ಲಪ್ಪ ಬಡಾವಣೆಗೆ ಸಂಪರ್ಕ ಕಲ್ಪಿಸುವ 5 ಹಾಗೂ 6ನೇ ಅಡ್ಡರಸ್ತೆ ಕಿತ್ತು ದಶಕಗಳೇ ಕಳೆದಿವೆ. ಚರಂಡಿ ಸಮಸ್ಯೆ ಜತೆಗೆ ಕಸ ವಿಲೇವಾರಿಗೂ ನಿರ್ಲಕ್ಷ್ಯವಹಿಸುವುದು ಸ್ಥಳೀಯರನ್ನು ಹೈರಾಣಾಗಿಸಿದೆ.

ಮನವಿಗಿಲ್ಲ ಸ್ಪಂದನೆ: ಚರಂಡಿ ಹಾಗೂ ರಸ್ತೆ ದುರಸ್ತಿಗೆ ನಗರಸಭೆ ಪೌರಾಯುಕ್ತರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ದುರಸ್ತಿ ನೆಪದಲ್ಲಿ ನಗರಸಭೆ ಸಿಬ್ಬಂದಿ, ಚರಂಡಿಗೆ ಹಾಕಿದ್ದ ಕಲ್ಲುಗಳನ್ನು ಕಿತ್ತು ರಸ್ತೆ ಬದಿಗೆ ಹಾಕಿದ್ದಾರೆ. ಮುಖ್ಯರಸ್ತೆ ದುರಸ್ತಿ ವಿಳಂಬವಾಗುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಸಮಸ್ಯೆಗೆ ಪರಿಹಾರ ನೀಡುವ ಅಧಿಕಾರಿಗಳೇ ಸಮಸ್ಯೆಗಳ ತಾಣವಾಗಿ ಮಾರ್ಪಾಡು ಮಾಡುತ್ತಿದ್ದಾರೆ. ಮುಖ್ಯರಸ್ತೆಯಲ್ಲಿ ಮಾತ್ರ ಕಸಸಂಗ್ರಹ ಮಾಡುತ್ತಿದ್ದು ಬಡಾವಣೆಯ ಕೆಲ ಪ್ರದೇಶದಲ್ಲಿ ಬಿಸಾಡಿದ್ದ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಸಮಸ್ಯೆಗಳಿಗೆ ಪರಿಹಾರ ದೊರಕಿಸುವಂತೆ ನಗರಸಭೆ ಗಮನ ಸೆಳೆಯಲಾಗುವುದು ಎಂದು ನಗರಸಭೆ ನಾಮನಿರ್ದೇಶಿತ ಸದಸ್ಯ ಕೆ.ವಸಂತ್ ತಿಳಿಸಿದರು.