ಮಂಗಳೂರು: ಮಲೈಕಾ ಸೊಸೈಟಿ ಹೆಸರಲ್ಲಿ ಗ್ರಾಹಕರಿಂದ ಕೋಟ್ಯಂತರ ರೂ. ಠೇವಣಿ ಸಂಗ್ರಹಿಸಿ ಅವಧಿ ಪೂರ್ಣಗೊಂಡಾಗ ಅದನ್ನು ಹಿಂತಿರುಗಿಸದೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಮಾದಕದ್ರವ್ಯ ಮತ್ತು ಆರ್ಥಿಕ ಅಪರಾಧಗಳ ಪೊಲೀಸರು ಮಂಗಳೂರು ಬ್ರ್ಯಾಂಚ್ ಮ್ಯಾನೇಜರ್ ರೀನಾ ಜೋಶ್‌ರನ್ನು ಬಂಧಿಸಿದ್ದಾರೆ.
ಸ್ಥಳ ಮಹಜರಿಗಾಗಿ ನಗರದ ಬೆಂದೂರ್‌ವೆಲ್ ಕಚೇರಿಗೆ ಕರೆತಂದಿರುವ ಪೊಲೀಸರು, ಆಕೆಯಿಂದ ಮಾಹಿತಿಗಳನ್ನು ಪಡೆಯುತ್ತಿದ್ದಾರೆ. ಕಚೇರಿಯಲ್ಲಿರುವ ಹಲವು ದಾಖಲೆ ಪತ್ರಗಳನ್ನು ಪೊಲೀಸರು ವಶಕ್ಕೆ ಪಡೆಸಿದ್ದಾರೆ.
ಮುಂಬೈ, ಮಂಗಳೂರು, ಉಡುಪಿ ಮೊದಲಾದ ಕಡೆ ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಶಾಖೆಗಳನ್ನು ಹೊಂದಿದೆ. ಹಿರಿಯ ನಾಗರಿಕರಿಗೆ ಆಕರ್ಷಕ ಬಡ್ಡಿ ದರ ನೀಡುವ ಮೂಲಕ ಸಾವಿರಾರು ಮಂದಿಯನ್ನು ತನ್ನೆಡೆಗೆ ಸೆಳೆದು ಕೋಟ್ಯಂತರ ರೂ. ಹೂಡಿಕೆ ಮಾಡುವಂತೆ ಮಾಡಿದ್ದರು. ಉನ್ನತ ಹುದ್ದೆಯಲ್ಲಿದ್ದವರು ನಿವೃತ್ತಿಯಾದಾಗ ಲಭಿಸಿದ ಹಣವನ್ನು ಇಲ್ಲಿ ಠೇವಣಿ ಇಟ್ಟಿದ್ದರು. ಅದರ ಅವಧಿ ಮುಗಿದಾಗ ಹಣ ಹಿಂತಿರುಗಿಸುವಂತೆ ಕೇಳಿದಾಗ ಸ್ಪಂದನೆ ಸಿಕ್ಕಿಲ್ಲ. ಈ ಬಗ್ಗೆ ವಿಚಾರಣೆ ನಡೆಸಿದಾಗ ಆ ಹಣವನ್ನು ಸೊಸೈಟಿ ಮಾಲೀಕರು ತಮ್ಮ ಖಾತೆಗೆ ಜಮೆ ಮಾಡಿರುವುದು ಗಮನಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ ಸಂಸ್ಥೆಯ ಸ್ಥಾಪಕ ಗಿಲ್ಬರ್ಟ್ ಬ್ಯಾಪಿಸ್ಟ್, ಪತ್ನಿ ಮರ್ಸಿಲಿನ್ ಬ್ಯಾಪ್ಟಿಸ್ಟ್ ಸೇರಿದಂತೆ ಆಡಳಿತ ಮಂಡಳಿಯ 12 ಮಂದಿ ವಿರುದ್ದ 100ಕ್ಕೂ ಅಧಿಕ ಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ.
ಜಿಲ್ಲೆಯ ಮಂಗಳೂರು, ತೊಕ್ಕೊಟ್ಟು, ಬಂಟ್ವಾಳ, ಪುತ್ತೂರು, ಸುಳ್ಯ, ವಿಟ್ಲ, ಮೂಡುಬಿದಿರೆ ಮೊದಲಾದ ಕಡೆ ಮಲೈಕಾ ಇಲೆಕ್ಟ್ರಾನಿಕ್ಸ್ ಮಳಿಗೆಗಳಿವೆ. ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿ ಸೊಸೈಟಿ ಪ್ರಧಾನ ಕಚೇರಿಯನ್ನು ಹೊಂದಿದೆ. ಜಿಲ್ಲೆಯಲ್ಲಿ 800ಕ್ಕೂ ಅಧಿಕ ಗ್ರಾಹಕರನ್ನು ಹೊಂದಿರುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ತನಿಖೆ ನಡೆಸಿ ಒಟ್ಟು ಎಷ್ಟು ಮಂದಿಗೆ ಎಷ್ಟು ಮೊತ್ತ ವಂಚನೆಯಾಗಿದೆ ಎಂಬುದು ಪತ್ತೆ ಮಾಡಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.