ಜಿಲ್ಲೆ

ಮಲೆಮಹದೇಶ್ವರನಿಗೆ 2ಕೋಟಿ ರೂ. ಕಾಣಿಕೆ

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ನಡೆದ ಹುಂಡಿ ಎಣಿಕೆಯಲ್ಲಿ ಈ ಬಾರಿ 28 ದಿನದ ಅವಧಿಯಲ್ಲಿ ಇ ಹುಂಡಿ ಹಣ ಸೇರಿದಂತೆ ಒಟ್ಟು 2,00,80,844 ರೂ. ಸಂಗ್ರಹವಾಗಿದೆ.

ಬೆಳಗ್ಗೆ 6.30 ರ ವೇಳೆಯಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ವಿದ್ವಾನ್ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ದೇಗುಲದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಸಂಗ್ರಹವಾಗಿದ್ದ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಚೀಲದಲ್ಲಿರಿಸಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ವಿಶಾಲ ಕೊಠಡಿಗೆ ರವಾನಿಸಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಆರಂಭಿಸಲಾಯಿತು. ಎಣಿಕೆ ಕಾರ್ಯವು ಸಂಜೆ 6.30 ರವರೆಗೂ ನಡೆಯಿತು.

ಈ ಬಾರಿ ಮಹಾಲಯ ಅಮಾವಾಸ್ಯೆ, ದಸರಾ ಜಾತ್ರಾ ಮಹೋತ್ಸವ ಹಾಗೂ ಸರ್ಕಾರಿ ರಜೆ ದಿನಗಳಂದು ಮ.ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರು. ಇದರಲ್ಲಿ ಹರಕೆ ಹೊತ್ತ ಭಕ್ತರು ದೇಗುಲ ಸೇರಿದಂತೆ ವಿವಿಧೆಡೆಯಲ್ಲಿ ಇರಿಸಿದ್ದ ಹುಂಡಿಗಳಲ್ಲಿ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹಾಕಿದ್ದರು. ಜತೆಗೆ ಇ ಹುಂಡಿಯ ಮೂಲಕವೂ ಹಣವನ್ನು ಸಂದಾಯ ಮಾಡಿದ್ದರು. ಇ ಹುಂಡಿ ಹಣ ರೂ. 2,74,204 ಸೇರಿದಂತೆ 2,00,80,844 ರೂ ನಗದು, 30 ಗ್ರಾಂ ಚಿನ್ನ ಹಾಗೂ 1 ಕೆ.ಜಿ 865 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಕಳೆದ ಬಾರಿ ಸೆ.26 ರಂದು ನಡೆದ ಹುಂಡಿ ಎಣಿಕೆಯಲ್ಲಿ 28 ದಿನದ ಅವಧಿಯಲ್ಲಿ 1,64,22,932 ರೂ ನಗದು, 21 ಗ್ರಾಂ ಚಿನ್ನ ಹಾಗೂ 2 ಕೆ.ಜಿ 100 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು.

ಚಲಾವಣೆಯಿಲ್ಲದ ನೋಟು:

2 ಸಾವಿರ ಮುಖಬೆಲೆಯ 22 ನೋಟುಗಳು ದೊರಕಿದೆಯಲ್ಲದೇ, ಸೆಂಟ್ರಲ್ ಬ್ಯಾಂಕ್ ಆಫ್ ಒಮನ್‌ನ 100 ಬೈಸ, ಕ್ವಾರ‌್ಟರ್ ಸೆಂಟ್ರಲ್ ಬ್ಯಾಂಕ್‌ನ 10 ರಿಯಲ್ಸ್ ದೊರೆತಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಉಪ ಕಾರ್ಯದರ್ಶಿ ಜಿ.ಎಲ್ ಚಂದ್ರಶೇಖರ್, ಲೆಕ್ಕಾಧೀಕ್ಷಕ ನಾಗೇಶ್, ಜಿಲ್ಲಾಧಿಕಾರಿ ಕಚೇರಿ ಮುಜರಾಯಿ ಇಲಾಖೆಯ ಶ್ವೇತಾ, ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು ಇದ್ದರು.