ಹನೂರು: ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಸೋಮವಾರ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಗ್ರಾಮಸ್ಥರು ರೈತ ಸಂಘದ ಪದಾಧಿಕಾರಿಗಳ ಜತೆಗೂಡಿ ಹನೂರಿನ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ರೈತ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಮ.ಬೆಟ್ಟದ ತಪ್ಪಲಿನ ಇಂಡಿಗನತ್ತ, ಪಡಸಲನತ್ತ, ಮೆಂದಾರೆ, ತೊಕೆರೆ, ತುಳಸಿಕೆರೆ, ಮೆದಗನಾಣೆ, ಆನೆಹೊಲ, ಹಳೆಯೂರು, ಕಾಡೋಲ ಸೇರಿದಂತೆ ಅನೇಕ ಗ್ರಾಮಗಳು ಕಾಡಂಚಿನಲ್ಲಿವೆ. ಆದರೆ ಇಲ್ಲಿನ ಜನರಿಗೆ ಇದುವರೆಗೂ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯಗಳು ಸಮರ್ಪಕವಾಗಿ ದೊರಕಿಲ್ಲ. ಇದರಿಂದ ಕಷ್ಟದ ನಡುವೆ ಹೀನಾಯದ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ದೂರಿದರು.
ಮೂಲ ಸೌಕರ್ಯ ಒದಗಿಸುವಂತೆ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಆದರೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಯಾವುದೇ ಕ್ರಮಕೈಗೊಂಡಿಲ್ಲ. ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಇಲ್ಲಿನ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನಹರಿಸಿ ಮೂಲ ಸೌಕರ್ಯವನ್ನು ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಇಲ್ಲಿನ ಮತದಾರರು ಮುಂಬರುವ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸಲಿದ್ದಾರೆ ಎಂದು ಎಚ್ಚರಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಈ ಹಿಂದೆ ಮ.ಬೆಟ್ಟದ ತಪ್ಪಲಿನ ಗ್ರಾಮಸ್ಥರು ಅರಣ್ಯದೊಳಗೆ ದೊಡ್ಡಿ ನಿರ್ಮಿಸಿಕೊಂಡು ದನಕರುಗಳನ್ನು ಮೇಯಿಸುತ್ತಿದ್ದರು. ಆದರೆ ಇದೀಗ ಅರಣ್ಯ ಇಲಾಖೆ ಜಾನುವಾರುಗಳನ್ನು ಅರಣ್ಯಕ್ಕೆ ಬಿಡುತ್ತಿಲ್ಲ. ಅಲ್ಲದೆ ಡಿಸಿಎಫ್ ಸಂತೋಷ್‌ಕುಮಾರ್ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ತುಂಬಾ ತೊಂದರೆಯಾಗಿದೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಸುದ್ದಿ ತಿಳಿದು ಸ್ಥಳಕ್ಕಾಮಿಸಿದ ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಗುರುಪ್ರಸಾದ್ ಗ್ರಾಮಸ್ಥರ ಮನವಿಯನ್ನು ಆಲಿಸಿ, ಈಗಾಗಲೇ ಗ್ರಾಮಕ್ಕೆ ಭೇಟಿ ನೀಡಿದ್ದು, ಸಮಸ್ಯೆಯ ಬಗ್ಗೆ ಅರಿವಿದೆ. ಈ ಸಂಬಂಧ ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗಿದೆ. ಆದ್ದರಿಂದ ಚುನಾವಣೆ ಮುಗಿದ ಬಳಿಕ ಮೂಲ ಸೌಕರ್ಯವನ್ನು ಒದಗಿಸುವುದಾಗಿ ಭರವಸೆ ನೀಡಿದರು. ಆದರೆ ಇದಕ್ಕೊಪ್ಪದ ಗ್ರಾಮಸ್ಥರು ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಮತದಾರರ ಗುರುತಿನ ಚೀಟಿ ಜೆರಾಕ್ಸ್ ಪ್ರತಿ ನೀಡಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಇಂಡಿಗನತ್ತದ ಪುಟ್ಟಯ್ಯ, ಕುಮಾರ, ತಮ್ಮಯ್ಯ, ತುಳಸಿಕೆರೆಯ ಮಾದೇವ, ಬೊಮ್ಮ, ಚೆನ್ನೂರಿನ ಶಿವರಾಮು, ಮ.ಬೆಟ್ಟದ ಮಹದೇವಸ್ವಾಮಿ, ಕಾಡೋಲದ ಮಾದೇಶ, ವೀರಣ್ಣ ಇತರರಿದ್ದರು.