ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಹಾಗೂ ಗಾಳಿ ಮುಂದುವರಿದಿದ್ದು, ಗಾಳಿಮಳೆಯಿಂದಾಗಿ ಅವಘಡಗಳು ಒಂದರ ಬೆನ್ನಿಗೆ ಒಂದರAತೆ ಸಂಭವಿಸುತ್ತಲೇ ಇವೆ. ಮರಗಳು ಧರೆಗುರುಳುವುದು ಸಾಮಾನ್ಯ ಎನ್ನುವಂತಾಗಿದೆ. ಆದರೆ ಜಿಲ್ಲೆಯ ಬಯಲು ಸೀಮೆ ತಾಲೂಕುಗಳಲ್ಲಿ ಮಳೆ ಕಡಿಮೆಯಾಗಿದೆ.
ಕಳಸ ತಾಲೂಕಿನ ಸುಂಕಸಾಲೆಯ ಮನೆಯೊಂದರ ಹಿಂದಿನ ಧರೆಕುಸಿದಿದ್ದು, ಮೂರು ಕುಟುಂಬಗಳ ಜೀವಭಯದಲ್ಲೇ ದಿನದೂಡುತ್ತಿವೆ. ತರೀಕೆರೆ ತಾಲೂಕು ಲಿಂಗದಹಳ್ಳಿಯ ಕಲ್ಲತ್ತಿಗಿರಿಯಲ್ಲಿ ಭಾರಿ ಮಳೆ ಗಾಳಿಯಿಂದ ಮರವೊಂದು ಕಾರಿನ ಮೇಲೆ ಬಿದ್ದಿದ್ದು, ವಾಹನ ಜಖಂಗೊAಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಭಾರೀ ಗಾಳಿ ಮಳೆಯಿಂದ ಬೃಹತ್ ಮರವೊಂದು ಮನೆ ಮೇಲೆ ಬಿದ್ದು ಮನೆ ಸಂಪೂರ್ಣ ಹಾನಿಗೊಳಗಾಗಿ ಗೃಹೋಪಯೋಗಿ ವಸ್ತುಗಳು ನಾಶವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕು ಮರಸಣಿಗೆ ಗ್ರಾಮದಲ್ಲಿ ನಡೆದಿದೆ. ಮರ ಬೀಳುವ ಶಬ್ದ ಕೇಳುತ್ತಿದ್ದಂತೆ ಮನೆಯೊಳಗಿದ್ದವರು ತಕ್ಷಣ ಹೊರಬಂದು ಜೀವಾಪಾಯದಿಂದ ಪಾರಾಗಿದ್ದಾರೆ. ಆದರೆ ಮನೆಯಲ್ಲಿದ್ದ ಪ್ರೇಮ ಎಂಬುವರ ಮೇಲೆ ಮರದ ರೆಂಬೆ ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ.
ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ತಾಲೂಕು ಅಧಿಕಾರಿಗಳು ಸೇರಿದಂತೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಿಗೊಳಗಾದ ಕುಟುಂಬಕ್ಕೆ ನೆರವು ನೀಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಜಿಲ್ಲೆಯಲ್ಲಿರುವ ನದಿಗಳು ಮೈದುಂಬಿ ಹರಿಯುತ್ತಿವೆ. ಇತ್ತ ಚಿಕ್ಕಮಗಳೂರು ನಗರ ಸೇರಿದಂತೆ ಬಯಲು ಪ್ರದೇಶದಲ್ಲಿ ಮಳೆ ಸ್ವಲ್ಪ ಕ್ಷೀಣಿಸಿದ್ದು, ಘಟ್ಟಪ್ರದೇಶದಲ್ಲಿ ಮಳೆಅಬ್ಬರ ಮುಂದುವರೆದಿದೆ.
ಶೃAಗೇರಿ ತಾಲೂಕಿನ ಕೆರೆಕಟ್ಟೆ, ಕಳಸ ತಾಲೂಕಿನ ಕುದುರೆಮುಖ ಘಟ್ಟಪ್ರದೇಶದಲ್ಲಿ ಜೋರು ಮಳೆಬೀಳುತ್ತಿದೆ. ತುಂಗಾ-ಭದ್ರಾ ನದಿಗಳಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದಿರುವAತೆ ಜಿಲ್ಲಾಡಳಿತ ಸೂಚಿಸಿದೆ.
ನದಿ ಪಾತ್ರದ ಹೊಲಗದ್ದೆ, ತೋಟಗಳಿಗೆ ತೆರಳುವವರು, ದನಕರುಗಳಿಗೆ ನೀರುಣಿಸಲು, ಬಟ್ಟೆ ತೊಳೆಯಲು ಹೋಗದಂತೆ ಎಚ್ಚರಿಕೆ ನೀಡಿದ್ದು, ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೂ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.
ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಮಂಗಳವಾರ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಮತ್ತು ಎನ್.ಆರ್.ಪುರ ತಾಲೂಕಿನ ಶಿಶುಪಾಲನ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿತ್ತು.
ಕುಸಿಯುವ ಹಂತದಲ್ಲಿ ಸರ್ಕಾರಿ ಶಾಲೆ
ಭಾರಿ ಮಳೆಯಿಂದಾಗಿ ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕಟ್ಟಡ ಕುಸಿಯುವ ಭೀತಿ ಎದುರಾಗಿದೆ. ೭೫ ವರ್ಷದ ಹಳೆಯ ಕಟ್ಟಡ ಇದಾಗಿದ್ದು, ಸೂಕ್ತ ದುರಸ್ತಿ ಕಾರ್ಯ ಮಾಡದ ಹಿನ್ನೆಲೆಯಲ್ಲಿ ಕಟ್ಟಡದ ಗೋಡೆಗಳು ಕುಸಿಯಲಾರಂಭಿಸಿವೆ.
ಕೆಲದಿನಗಳಿAದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಶಾಲಾ ಕಟ್ಟಡದ ಒಂದು ಭಾಗದ ಗೋಡೆ ಕಿಟಕಿ ಸಮೇತ ಕುಸಿದು ಬಿದ್ದಿದೆ. ಶಾಲಾ ಕಟ್ಟಡ ಶಿಥಿಲವಾಗಿದ್ದು, ಯಾವುದೇ ಸಂದರ್ಭದಲ್ಲಿ ಕುಸಿಯುವ ಸ್ಥಿತಿ ಇದೆ. ಆದರೆ ಕಳೆದ ಬೇಸಿಗೆ ರಜೆ ಸಂದರ್ಭದಲ್ಲಿ ದುರಸ್ತಿ ಕಾರ್ಯ ಮಾಡುವ ನೆಪದಲ್ಲಿ ತೆಪೆ ಹಾಕುವ ಕೆಲಸ ಮಾಡಲಾಗಿದೆ ಎಂದು ಗ್ರಾಮಸ್ಥರು ಹಾಗೂ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಶಿಥಿಲಗೊಂಡಿರುವ ಶಾಲಾ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.