ಜಿಲ್ಲೆ

ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ

ಬೇಲೂರು: ತಾಲೂಕಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ತೋಟ, ಗದ್ದೆಗಳೆನ್ನದೆ ಎಲ್ಲೆಂದರಲ್ಲಿ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಪಡಿಸಿ, ಸಾರ್ವಜನಿಕರು ವಾಸಿಸುವ ಮನೆಗಳ ಸಮೀಪ, ಸುತ್ತಮುತ್ತ ಒಂಟಿ ಸಲಗವೊಂದು ಮಂಗಳವಾರ ಬೆಳಗ್ಗೆ ಘೀಳಿಡುತ್ತ ಓಡಾಡುವ ಮೂಲಕ ಗ್ರಾಮಸ್ಥರಲ್ಲಿ ದಿಗಿಲು ಹುಟ್ಟಿಸಿರುವ ಘಟನೆ ತಾಲೂಕಿನ ಚಿಕ್ಕಬಿಕ್ಕೋಡು ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.


ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದ ಆಸುಪಾಸಿನಲ್ಲೆ ಕಳೆದ ಕೆಲ ದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟ ಒಂಟಿ ಸಲಗವೊಂದು ಕಾಫಿ ತೋಟಗಳಿಗೆ ಒಂದಿ ಕೊಂಡಂತಿರುವ ಚಿಕ್ಕಬಿಕ್ಕೋಡು ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಪ್ರತ್ಯಕ್ಷವಾಗಿದೆ. ಒಂಟಿ ಸಲಗ ಗ್ರಾಮದೊಳಕ್ಕೆ ಆಗಮಿಸುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಒಮ್ಮೆಲೆ ಎದ್ದೆನೋ ಬಿದ್ದೆನೋ ಎಂದು ಕೂಗುತ್ತ ಎಲ್ಲ ಗ್ರಾಮಸ್ಥರಿಗೂ ವಿಷಯ ತಿಳಿಸಿ ಮನೆಯಿಂದ ಯಾರೂ ಹೊರ ಬಾರದಂತೆ ತಿಳಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ಗಾಬರಿ ಗೊಂಡ ಕೆಲವರು ಮನೆ ಮೇಲೆಯೆ ಹತ್ತಿ ಕುಳಿತಿದ್ದ ಘಟನೆಯೂ ನಡೆದಿದೆ. ಅಲ್ಲದೆ ಗ್ರಾಮಕ್ಕೆ ಆಗಮಿಸಿದ ಕಾಡಾನೆಯಿಂದ ದಿಗಿಲು ಗೊಂಡಿರುವ ಗ್ರಾಮಸ್ಥರು ಮನೆಯಿಂದ ಆಚೆ ಬರಲು ಭಯ ಪಡುವಂತ್ತಾಗಿದೆ. ಕಳೆದ ಕೆಲ ದಿನಗಳಿಂದ ಈ ಭಾಗದ ಅಕ್ಕಪಕ್ಕದ ಗ್ರಾಮಗಳಲ್ಲೆ ಬೀಡು ಬಿಟ್ಟಿರುವ 23ಕ್ಕೂ ಹೆಚ್ಚಿನ ಕಾಡಾನೆಗಳ ಹಿಂಡು ಪ್ರತಿನಿತ್ಯ ಈ ಭಾಗದ ಒಂದಿಲ್ಲೊಂದು ತೋಟ, ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶಕ್ಕೆ ಕಾರಣವಾಗುತ್ತಿವೆ. ಮತ್ತೆ ಕೆಲವು ರಾಜಾರೋಷವಾಗಿ ರಸ್ತೆ ಹಾಗೂ ಜನರು ವಾಸಿಸುವ ಪ್ರದೇಶಗಳಲ್ಲಿ ಸಂಚರಿಸುವುದಲ್ಲದೆ, ಜನರನ್ನು ಕಂಡರೆ ಓಡಿಸಿಕೊಂಡು ಹೋಗುವುದರಿಂದ ಈ ಭಾಗದಲ್ಲಿನ ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಇನ್ನೂ ಕಾಡಾನೆಗಳ ಉಪಟಳದಿಂದ ಮಹಿಳೆಯರು, ಮಕ್ಕಳು, ವೃದ್ಧರು, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಜೀವ ಭಯದಲ್ಲೆ ಓಡಾಡುವಂತ್ತಾಗಿದೆ. ಮತ್ತು ಮನೆಯಿಂದ ಹೊರ ಬರಲು ಹೆದರುವಂತ್ತಾಗಿದೆ.

ರಾತ್ರಿ ಸಮಯದಲ್ಲಂತೂ ಜೀವ ಕೈಯಲ್ಲಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ ಕಾಡಾನೆಗಳಿರುವ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವುದು ಬಿಟ್ಟರೆ ಬೇರೇನು ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಬಂಧಿಸಿದ ಇಲಾಖೆ ಹಿರಿಯ ಅಧಿಕಾರಿಗಳು ಮತ್ತ ಸರ್ಕಾರ ಇತ್ತ ಗಮನ ಹರಿಸಿ ಮಲೆನಾಡು ಭಾಗದ ಜನರಿಗಾಗುತ್ತಿರುವ ಕಾಡಾನೆಗಳ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕು ಎಂದು ಬೆಳೆಗಾರರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಮ್ಮ ಭಾಗದಲ್ಲಂತೂ ಕಳೆದ ಎರಡು ವರ್ಷಗಳಿಂದ ಕಾಡಾನೆಗಳ ಹಾವಳಿ ಮಿತಿ ಮೀರಿರುವುದರಿಂದ ನೆಮ್ಮದಿಯಾಗಿ ನಿದ್ರಿಸುವಂತಿಲ್ಲ. ಯಾವಾಗ ಎಲ್ಲಿ ಕಾಡಾನೆಗಳು ಮನೆ ಅಥವಾ ತೋಟಗಳಿಗೆ ಪ್ರತ್ಯಕ್ಷವಾಗುತ್ತವೊ ಅಥವಾ ಏನಾದರೂ ಅನಾಹುತ ಮಾಡಿದರೆ ಎಂಭ ಭಯದಲ್ಲೆ ಜೀವನ ನಡೆಸುವಂತ್ತಾಗಿದೆ. ಸಂಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ನಮ್ಮ ಭಾಗದಲ್ಲಿ ಬಿಡು ಬಿಟ್ಟಿರುವ ಕಾಡಾನೆಗಳನ್ನು ಶಾಶ್ವತವಾಗಿ ಕಾಡಿಗಟ್ಟುವ ಕೆಲಸಕ್ಕೆ ಮುಂದಾಗಬೇಕು.:-ತೇಜು ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ, ಚಿಕ್ಕಬಿಕ್ಕೋಡು ಬೇಲೂರು ತಾಲೂಕು

''ಚಿಕ್ಕಬಿಕ್ಕೋಡು ಗ್ರಾಮಕ್ಕೆ ನುಗ್ಗಿದ್ದ ಒಂಟಿ ಸಲಗ ಈಗ ಸಕಲೇಶಪುರದ ಕಾಡಿನ ಕಡೆಗೆ ತೆರಳಿದೆ. ಆದರೆ ಬಿಕ್ಕೋಡು ಆಸುಪಾಸಿನಲ್ಲೆ 5 ಮತ್ತು 8 ಕಾಡಾನೆಗಳಿರುವ ಪ್ರತ್ಯೇಕ ಎರಡು ಗುಂಪುಗಳಿದ್ದು, ನಮ್ಮ ಸಿಬ್ಬಂದಿ ಅವುಗಳ ಚಲನವಲನ ಗಮನಿಸುತಿದ್ದು ಅವುಗಳನ್ನೂ ಇಂದು ಅಥವಾ ನಾಳೆ ಕಾಡಿಗಟ್ಟುವ ಕೆಲಸ ಮಾಡಲಿದ್ದೇವೆ"'ವಿನಯ್ ಕುಮಾರ್, ವಲಯ ಅರಣ್ಯಾಧಿಕಾರಿ ಬೇಲೂರು