ಹಾಸನ: ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೂ ತಾತ್ಕಾಲಿಕವಾಗಿ ಆಲೂರು ವನ್ಯಜೀವಿ ಉಪ ವಿಭಾಗ ರಚಿಸಿ, 46 ಹುದ್ದೆಗಳನ್ನು ಸೃಜಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ 15 ವರ್ಷಗಳಲ್ಲಿ ಕಾಡಾನೆ ದಾಳಿಯಿಂದ 72 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2022-23ನೇ ಸಾಲಿನಲ್ಲಿ 4 ಮಾನವ ಪ್ರಾಣಹಾನಿ ಆಗಿದೆ. ಬೆಳೆ ಆಸ್ತಿ-ಪಾಸ್ತಿ ನಷ್ಟ ಸೇರಿದಂತೆ ಒಟ್ಟು 1146 ಕೋಟಿ ರೂ. ಪರಿಹಾರ ನೀಡಲಾಗಿದೆ. ಇನ್ನೂ 1.33 ಕೋಟಿ ರೂ. ಪರಿಹಾರ ನೀಡುವುದು ಬಾಕಿ ಇದೆ ಎಂದು ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಸಚಿವರು ತಿಳಿಸಿದ್ದಾರೆ.
ಕಾಡಾನೆ ದಾಳಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಎಂ.ಕೆ. ಅಪ್ಪಯ್ಯ ವರದಿಯಂತೆ 2020-21 ಮತ್ತು 2021-22ನೇ ಸಾಲಿನಲ್ಲಿ ಒಟ್ಟು 9.659 ಕಿ.ಮೀ. ರೈಲು ಹಳಿ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. 2022-23ನೇ ಸಾಲಿನಲ್ಲಿ 11.475 ಕಿ.ಮೀ. ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಬಾಕಿ 24 ಕಿ.ಮೀ. ಬ್ಯಾರಿಕೇಡ್ ನಿರ್ಮಿಸಲು ಪ್ರತಿ ಕಿ.ಮೀ.ಗೆ 1.60 ಕೋಟಿ ರೂ.ಗಳಂತೆ ಅಂದಾಜು 38.40 ಕೋಟಿ ರೂ. ಅನುದಾನವನ್ನು ಒಂದೇ ಹಂತದಲ್ಲಿ ಬಿಡುಗಡೆ ಮಾಡಿದರೆ ಕಾಮಗಾರಿ ಪೂರ್ಣಗೊಳಿಸಿ ಕಾಡಾನೆ ದಾಳಿಯನ್ನು ಶಾಶ್ವತವಾಗಿ ತಡೆಯಬಹುದು ಎಂದು ವಿನಂತಿಸಿದ್ದಾರೆ.
ಅಲ್ಲಿಯವರೆಗೆ ಸಕಲೇಶಪುರ, ಯಸಳೂರು, ಆಲೂರು, ಬೇಲೂರು ಮತ್ತು ಅರಕಲಗೂಡು ವ್ಯಾಪ್ತಿಗೊಳಪಟ್ಟಂತೆ ತಾತ್ಕಾಲಿಕವಾಗಿ ಆಲೂರು ವನ್ಯಜೀವಿ ಉಪ ವಿಭಾಗ ರಚಿಸಿ, ಒಬ್ಬ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಇಬ್ಬರು ವಲಯ ಅರಣ್ಯಾಧಿಕಾರಿ, 5 ಉಪ ವಲಯ ಅರಣ್ಯಾಧಿಕಾರಿ, 13 ಅರಣ್ಯ ರಕ್ಷಕರು ಮತ್ತು 26 ಅರಣ್ಯ ವಿಕ್ಷಕರ ಹುದ್ದೆಗಳನ್ನು ಸೃಜಿಸುವಂತೆ ಮನವಿ ಮಾಡಿದ್ದಾರೆ.
2003 ರಿಂದ ಇಲ್ಲಿಯವರೆಗೆ ವಿವಿಧ ಕಾರಣಗಳಿಂದಾಗಿ 33 ಕಾಡಾನೆಗಳು ಮೃತಪಟ್ಟಿವೆ, 74 ಕಾಡಾನೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸಲಾಗಿದೆ. ಆದರೂ ಕಾಡಾನೆ ದಾಳಿ ಸಮಸ್ಯೆ ನಿಂತಿಲ್ಲ. ಹಾಸನ ಜಿಲ್ಲೆಯ ದಕ್ಷಿಣ ಗಡಿಗೆ ಹೊಂದಿಕೊಂಡಂತಿರುವ ಕೊಡಗಿನ ಅರಣ್ಯ ಪ್ರದೇಶಗಳಿಂದ ಆನೆಗಳು ಹಾಸನಕ್ಕೆ ಬರುತ್ತಿರುವುದನ್ನು ಅರಣ್ಯ ಇಲಾಖೆ ಗುರುತಿಸಿದ್ದು, ಸುಮಾರು 45 ಕಿ.ಮೀ. ಉದ್ದದ ಹೇಮಾವತಿ ಜಲಾಶಯದ ಅಂಚಿನ ಮೂಲಕ ಆನೆಗಳು ಹಾಸನ ಜಿಲ್ಲೆಗೆ ಬರುತ್ತಿವೆ. ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಹೇಮಾವತಿ ಜಲಾಶಯದ ಅಂಚಿನ ಉದ್ದಕ್ಕೂ ರೈಲ್ವೆ ಹಳಿ ಬ್ಯಾರಿಕೇಡ್ ನಿರ್ಮಿಸಿ, ಜಿಲ್ಲೆಯಲ್ಲಿರುವ ಎಲ್ಲ ಆನೆಗಳನ್ನು ಹೊರಗಡೆಗೆ ಸ್ಥಳಾಂತರಿಸಿದರೆ, ಆನೆ ಹಾವಳಿಯಿಂದ ಹೈರಾಣಾಗಿರುವ ಜಿಲ್ಲೆಯ 300 ಹಳ್ಳಿಗಳ ಜನರಿಗೆ ನೆಮ್ಮದಿ ವಾತಾವರಣ ಕಲ್ಪಿಸಬಹುದು ಎಂಬುದಾಗಿ ಎಂ.ಕೆ. ಅಪ್ಪಯ್ಯ ವರದಿ, ಕರ್ನಾಟಕ ಗಜ ಕಾರ್ಯಪಡೆ ಸೂಚನೆ ಮತ್ತು ಅರಣ್ಯ ಇಲಾಖೆ ಟಿಪ್ಪಣಿಯನ್ನು ಸಚಿವರು ಉಲ್ಲೇಖಿಸಿದ್ದಾರೆ.