ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ತುಂಗಾ ನದಿ ಉಕ್ಕಿ ಹರಿಯುತ್ತಿರುವುದು. 
ಜಿಲ್ಲೆ

ಮಲೆನಾಡಿನಲ್ಲಿ ಭಾರಿ ಗಾಳಿ ಮಳೆ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಆರ್ಭಟ ಮುಂದುವರಿದಿದ್ದು, ತುಂಗಾ ನದಿಯು ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದೆ. ಶೃಂಗೇರಿಯ ಕೆರೆಕಟ್ಟೆ ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ತುಂಗಾ ನದಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದ್ದು, ನದಿಯ ನೀರು ರಸ್ತೆಯ ಮಟ್ಟಕ್ಕೆ ತಲುಪಿದೆ.

ಈ ಸ್ಥಿತಿ ಮುಂದುವರಿದರೆ ಗಾಂಧಿ ಮೈದಾನ ಮತ್ತು ಸಮಾನಾಂತರ ರಸ್ತೆಗಳು ಜಲಾವೃತಗೊಳ್ಳುವ ಸಾಧ್ಯತೆಯಿದೆ. ಮಲೆನಾಡಿಗರು ನದಿಪಾತ್ರದ ಹೊಲ, ಗದ್ದೆ, ಮತ್ತು ತೋಟಗಳಿಗೆ ನೀರು ನುಗ್ಗುವ ಆತಂಕದಲ್ಲಿದ್ದಾರೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ತುಂಗಾ ನದಿಯು ಮೈದುಂಬಿ, ಶೃಂಗೇರಿಯ ಗಾಂಧಿ ಮೈದಾನದ ವಾಹನ ಪಾರ್ಕಿಂಗ್ ಜಾಗದವರೆಗೂ ನೀರು ತಲುಪಿದೆ. ಶೃಂಗೇರಿ-ಮಂಗಳೂರು ಹೆದ್ದಾರಿಯಲ್ಲಿ ಗುಡ್ಡ ಕುಸಿತದಿಂದ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಆಗುಂಬೆ ಘಾಟ್ ಮೂಲಕ ಪರ್ಯಾಯ ಸಂಚಾರ ವ್ಯವಸ್ಥೆ ಮಾಡಲಾಗಿದೆ. ನದಿಯ ದಡದಲ್ಲಿರುವ ಮನೆಗಳ ಹಿಂಭಾಗದ ರಸ್ತೆಗಳಿಗೂ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಕಳೆದ 24 ಗಂಟೆಗಳಲ್ಲಿ ಶೃಂಗೇರಿಯಲ್ಲಿ 165 ಮಿ.ಮೀ., ಕೆರೆಕಟ್ಟೆಯಲ್ಲಿ 280 ಮಿ.ಮೀ., ಮತ್ತು ಆಗುಂಬೆಯಲ್ಲಿ 164 ಮಿ.ಮೀ. ಮಳೆಯಾಗಿದ್ದು, ಈ ಪರಿಸ್ಥಿತಿಯು ರೈತರಿಗೆ ತೀವ್ರ ಸವಾಲು ಒಡ್ಡಿದೆ.