ಜಿಲ್ಲೆ

ಮಲೆನಾಡಿನಲ್ಲಿ ಅರಣ್ಯ ಇಲಾಖೆಯವರ ನಿರ್ಲಕ್ಷ್ಯದಿಂದ ಆನೆಗಳು ಸಾವು

ಹಾಸನ: ಅರಣ್ಯ ಇಲಾಖೆಯವರ ನಿರ್ಲಕ್ಷ್ಯದಿಂದ ಅನೇಕ ಆನೆಗಳು ಸಾವನಪ್ಪಿದ್ದು, ಈ ಬಗ್ಗೆ ಸರಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಸಕಲೇಶಪುರದ ಸಾಮಾಜಿಕ ಹೋರಾಟಗಾರ ಹುರುಡಿ ವಿಕ್ರಂ ಆಗ್ರಹಿಸಿದರು.
ಆನೆಗಳ ಗುಂಪು ದಾಟಲು ಸೇತುವೆ ಮಾಡಿಕೊಡಬೇಕು. ಹಾಗೂ ಅರ್ಜುನ ಆನೆ ಸತ್ತು 1 ವರ್ಷವಾಗಿದ್ದರೂ, ಇದುವರೆಗೂ ಸಾವಿನ ಬಗ್ಗೆ ನಿಖರ ವರದಿ ಕೊಟ್ಟಿಲ್ಲ. ಅರ್ಜುನ ಆನೆಯ ಮೂಳೆಯನ್ನು ಮೈಸೂರು ಅರಮನೆಯಲ್ಲಿ ಇಡಬೇಕು ಹಾಗೂ ಭೀಮ ಆನೆ ದಾಳಿಯಿಂದ ಸಾವನಪ್ಪಿದ ಶಾರ್ಪ್ ಶೂಟರ್ ವೆಂಕಟೇಶ್‌ಗೆ ಮರಣೋತ್ತರ ಪ್ರಶಸ್ತಿ ನೀಡಿ ಅವರ ಮಗನಿಗೆ ಸರಕಾರಿ ಹುದ್ದೆ ಕೊಡಬೇಕೆಂದು ಬುಧವಾರ ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದರು.
ಕಳೆದ ಒಂದು ವಾರದ ಹಿಂದೆ ಸಕಲೇಶಪುರ ತಾಲೂಕಿನ ಕಡ್ರಹಳ್ಳಿಯಲ್ಲಿ ಸಾವನಪ್ಪಿದ ಹೆಣ್ಣು ಆನೆ ಸಾವು ಆಕಸ್ಮಿಕವಲ್ಲ. ಅದಕ್ಕೂ ಒಂದು ವಾರ ಮುಂಚೆಯಿಂದಲೂ ಅದು ಅನಾರೋಗ್ಯದಿಂದ ನೆರಳುತ್ತಿದ್ದು. ಆದರೆ ಅರಣ್ಯ ಇಲಾಖೆಯವರು ತುರ್ತು ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಮಾಡಿದ್ದೇ ಆನೆಯ ಸಾವಿಗೆ ಕಾರಣ ಎಂದು ದೂರಿದರು.
ಯಸಳೂರು ಅರಣ್ಯ ವಲಯಕ್ಕೆ ಸೇರಿರುವ ಹಳ್ಳಿಗಳ ಬಳಿ ಆನೆಗಳು ಸತ್ತಿವೆ. ಒಟ್ಟು 4 ಹೆಣ್ಣಾನೆ, 5 ಗಂಡಾನೆಗಳು ಕೊನೆಯುಸಿರೆಳೆದಿವೆ. ಗಂಡಾನೆಗಳು ದಂತಚೋರರ ದುರಾಸೆಗೆ ಗುಂಡೇಟಿಗೆ ಬಲಿಯಾಗಿವೆ. ಇದಕ್ಕೆ ಪುಷ್ಟಿ ಎಂಬಂತೆ ಸೋಮವಾರಪೇಟೆಯಲ್ಲಿ ಒಂದು ಆನೆಯ ದಂತ ಪತ್ತೆಯಾಗಿದೆ ಎಂದು ಹೇಳಿದರು.
ಹೊಸಳ್ಳಿ ಬೆಟ್ಟದ ಹತ್ತಿರ ಸತ್ತ ಗಂಡಾನೆ ಕೋರೆಯನ್ನು ಅರಣ್ಯ ಇಲಾಖೆಯವರು ವಶಪಡಿಸಿಕೊಂಡರು. ಉಳಿದ ನಾಲ್ಕು ಆನೆಯ ಕೋರೆಗಳು ದಂತ ಕಳ್ಳರ ಪಾಲಾದವು. ಬಹುಶ: ಕರ್ನಾಟಕದಲ್ಲಿ ಎಲ್ಲೂ ಈ ರೀತಿಯ ಆನೆಗಳ ಕಗ್ಗೊಲೆ ನಡೆಯುತ್ತಿಲ್ಲ. ಹೀಗಾಗಿ ಸರಕಾರ ಕೂಡಲೇ ಎಚ್ಚೆತ್ತು ಆನೆಗಳ ಸರಣಿ ಸಾವು ಹಾಗೂ ದಂತ ಕಳವು ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.
ಹೈವೆ ರಸ್ತೆಯಿಂದ ಆನೆಗಳ ಹಿಂಡು ರಸ್ತೆ ದಾಟಲು ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ಸಕಲೇಶಪುರ, ಆಲೂರು ಭಾಗಕ್ಕೆ ಬೇಲೂರು ಭಾಗದಿಂದ ಬರಲು ಆನೆಗಳ ಹಿಂಡಿಗೆ ಸಾಧ್ಯವಾಗುತ್ತಿಲ್ಲ. ಹೊಸೂರು ಎಸ್ಟೇಟ್‌ನ ಹೊಟೆಲ್ ಹತ್ತಿರದಿಂದ ಗುಳಗಳಲೆ, ಯಡಹಳ್ಳಿವರೆಗೂ 4 ಕಿಮೀ ಮಾತ್ರ ಆನೆ ಕಾರಿಡಾರ್ ಇದೆ. ಬೆಳಗೋಡಿನಿಂದ ಎತ್ತಿನಹೊಳೆ ನೀರಿನ ಕಾಲುವೆ ಅಡ್ಡ ಬರುವುದರಿಂದ ಆನೆಗಳ ಕಾರಿಡಾರ್ ಕಟ್ ಆಗಿದೆ. ಗುಳಗಳಲೆ ಹೊಸೂರು ಎಸ್ಟೇಟ್‌ನ ಹೊಟೇಲ್‌ಗಳ ಮಧ್ಯೆ 2 ಕಿಮೀ ಅಂತರದಲ್ಲಿ ಆನೆಗಳು ದಾಟಲು ಒಂದು ಸೇತುವೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.