ಚನ್ನರಾಯಪಟ್ಟಣ: ಎರಡ್ಮೂರು ದಶಕಗಳಿಂದ ವಾಡಿಕೆ ಮಳೆಯೂ ಆಗದೆ ಬರದ ಬೀಡಾಗಿದ್ದ ಬಯಲು ಸೀಮೆ ಮೂರು ತಿಂಗಳಿಂದ ವರುಣನ ಕೃಪೆಯಿಂದ ಮಲೆನಾಡಿನಂತೆ ಕಂಗೊಳಿಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ತಾಲೂಕಿನಾದ್ಯಂತ ಭಾನುವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಹಳ್ಳ-ಕೊಳ್ಳಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು ಕೆರೆ-ಕಟ್ಟೆಗಳು ಎರಡನೇ ಬಾರಿಗೆ ಮೈದುಂಬಿ ಕೋಡಿಬಿದ್ದು ನೀರು ಹೊರ ಹರಿಯುತ್ತಿದೆ.
ಕಳೆದ ವಾರ ದಿಡಗ, ನರಿಹಳ್ಳಿ, ಮಾದಲಗೆರೆ, ತುಪ್ಪದಹಳ್ಳಿ, ಜಂಬೂರು, ಹುಲಿಕೆರೆ, ಬಾಗೂರು, ಮತಿಘಟ್ಟ, ಹಿರೀಸಾವೆ, ಬಾಳಗಂಚಿ, ರಂಗನಾಥಪುರ, ಕಕ್ಕಿಹಳ್ಳಿ, ಸೋರೆಕಾಯಿಪುರ ಸೇರಿದಂತೆ ಬಹುತೇಕ ಕೆರೆ-ಕಟ್ಟೆಗಳು ಮೈದುಂಬಿ ಹರಿದಿದ್ದವು.
ಭಾನುವಾರ ರಾತ್ರಿ 8 ಗಂಟೆಯಲ್ಲಿ ಪ್ರಾರಂಭವಾದ ಮಳೆ 11 ಗಂಟೆವರೆಗೆ ಸತತ 3ಗಂಟೆ ಸುರಿಯಿತು, ನಂತರವೂ ಮಳೆ ಮುಂದುವರಿದಿದ್ದು ಸೋಮವಾರ ಬೆಳಗ್ಗೆ 9 ಗಂಟೆವರೆಗೂ ಸುರಿಯಿತು.
ಇದರಿಂದ ಕಳೆದ ವಾರ ಮೈದುಂಬಿ ಹರಿದಿದ್ದ ಬಹುತೇಕ ಕೆರೆಗಳು ಮತ್ತೊಮ್ಮೆ ಕೋಡಿ ಬಿದ್ದಿವೆ. ಹಳ್ಳ-ಕೊಳ್ಳಗಳಲ್ಲಿ ಅಪಾಯಕಾರಿ ಹಂತದಲ್ಲಿ ನೀರು ಹರಿಯುತ್ತಿದೆ. ದಿಡಗ ಹಳೇ ಗ್ರಾಮದ ರಸ್ತೆ, ಗಡಿಭಾಗದ ಹಿಂಡುಮಾರನಹಳ್ಳಿ ರಸ್ತೆ ಮಧ್ಯೆ ಹಳ್ಳದಲ್ಲಿ ನೀರು ಹರಿಯುವ ಮೂಲಕ ರಸ್ತೆ ಜಲಾವೃತವಾಗಿದ್ದು ಜನ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು.
ತೋಟಿಕೆರೆ ಗ್ರಾಮದ ಕೆರೆ ತಂಬಿ ಕೋಡಿ ಮೂಲಕ ಅಪಾರ ಪ್ರಮಾಣದಲ್ಲಿ ನೀರು ಹೊರ ಹರಿಯುತ್ತಿದ್ದು ಹಳ್ಳದ ಮೂಲಕ ಮೇಟಿಕೆರೆ ಸೇರುತ್ತಿದೆ. ಆದರೆ ಹಳ್ಳದಲ್ಲಿ ಗಿಡ-ಗಂಟಿಗಳು ಬೆಳೆದು ಮುಚ್ಚಿಕೊಂಡಿರುವ ಪರಿಣಾಮ ತೋಟದ ಸಾಲಿಗೆ ನುಗ್ಗಿದ ನೀರು ಮಾಚಕಬೂವನಹಳ್ಳಿ ಬಳಿ ದಿಡಗ-ಹಿರೀಸಾವೆ ರಸ್ತೆ ಮೇಲೆ ಹರಿಯುತ್ತಿದೆ.
ಇನ್ನು ಕೃಷಿ ಜಮೀನುಗಳಿಗೆ ನುಗ್ಗಿ ಜಲಾವೃತಗೊಂಡಿರುವ ಪರಿಣಾಮ ಬಿತ್ತನೆಯಾಗಿರುವ ರಾಗಿ, ಭತ್ತ, ಮುಸುಕಿನ ಜೋಳ, ತೊಗರಿ ಹಾಗೂ ಇನ್ನಿತರ ಬೆಳೆಗಳಿಗೆ ಹಾನಿಯಾಗಿದೆ. ಬೆಳವಣಿಗೆಯಲ್ಲಿ ಕುಂಠಿತಗೊಂಡಿದ್ದು ಹಳದಿ ವರ್ಣಕ್ಕೆ ತಿರುಗಿರುವ ಬೆಳೆಗಳು ಶೀತ ಪೀಡಿತಗೊಂಡು ಕೊಳೆತು ಹೋಗುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ.