ಶೃಂಗೇರಿ: ಮಲೆನಾಡಿನ ತೋಟ, ಗದ್ದೆಗೆ ಗೊಬ್ಬರ, ತೋಟದಿಂದ ತರುವ ಅಡಕೆ, ಕಾಫಿ, ಕಾಳುಮೆಣಸು ಮತ್ತಿತರ ಬೆಳೆಯನ್ನು ತೋಟದಿಂದ ಸಾಗಿಸಲು ಅನುಕೂಲವಾಗುವಂತೆ ಬ್ಯಾಟರಿ ಚಾಲಿತ ಯಂತ್ರ ಆವಿಷ್ಕರಿಸಲಾಗಿದೆ ಎಂದು ಉದ್ಯಮಿ ಎಸ್.ಕೆ.ಮಿಥುನ್ ಹೇಳಿದರು.
ಮಾನಗಾರಿನ ಹೊಸಮನೆ ತ್ಯಾಗರಾಜರಾವ್ ತೋಟದಲ್ಲಿ ನಾಗರಿಕ ಹಕ್ಕು ಸಮಿತಿ ಬುಧವಾರ ಏರ್ಪಡಿಸಿದ್ದ ಬ್ಯಾಟರಿ ಚಾಲಿತ, ರಿಮೋಟ್ ನಿಯಂತ್ರಿತ ಯಂತ್ರದ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು. 500 ಕೆಜಿ ಭಾರ ಹೊರುವ ಸಾಮರ್ಥ್ಯದ ಈ ಯಂತ್ರ ನಾಲ್ಕು ಚಕ್ರದ ಚಾಲನೆ ಹೊಂದಿದೆ. ಇದರಿಂದ ಕೆಸರು, ಜಾರಿಕೆ, ಗುಡ್ಡಗಾಡು ಪ್ರದೇಶದಲ್ಲೂ ಸಮರ್ಥವಾಗಿ ನಿರ್ವಹಿಸಬಹುದಾಗಿದೆ. ಪವರ್ ಟ್ರಿಲ್ಲರ್ ಚಕ್ರ ಅಳವಡಿಸಿದ್ದು, ಇದು ನಿಂತಲ್ಲೇ ತಿರುಗುತ್ತದೆ. ಅತಿ ಕಡಿಮೆ ವೆಚ್ಚದಲ್ಲಿ ನಿರ್ವಹಣೆ ಮಾಡಬಹುದಾಗಿದ್ದು, ಇದರೊಂದಿಗೆ ತೋಟಕ್ಕೆ ಔಷಧ ಸಿಂಪಡಣೆ, ಕಳೆ ಕೊಚ್ಚುವಿಕೆ ಸಹ ಇದರಲ್ಲಿ ಮಾಡಬಹುದಾಗಿದೆ. ಐದು ಗಂಟೆ ಚಾರ್ಜ್ ಮಾಡಿದಾಗ ಯಂತ್ರ 8 ಗಂಟೆಯಷ್ಟು ಕಾರ್ಯ ನಿರ್ವಹಿಸುತ್ತದೆ. ಯಂತ್ರದ ಚಾಲನೆಯೂ ಸುಲಭವಾಗಿದೆ ಎಂದರು.
ನಾಗರಿಕ ಹಕ್ಕುಗಳ ಸಮಿತಿಯ ಅಂಬ್ಲೂರು ರಾಮಕೃಷ್ಣರಾವ್ ಮಾತನಾಡಿ, ರೈತರು ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಸಾಕಷ್ಟು ಯಂತ್ರೋಪಕರಣದ ಪರಿಚಯವಾಗಿದೆ. ನೂತನ ಯಂತ್ರ ಪವರ್ ಟ್ರಿಲ್ಲರ್, ಟ್ರಾೃಕ್ಟರ್ ಮಾಡುವ ಕೆಲಸವನ್ನು ಮಾಡುತ್ತದೆ. ಕೇವಲ 6 ಅಡಿ ಜಾಗ ಇದ್ದರೆ ತೋಟದಲ್ಲೂ ಸುಲಭವಾಗಿ ಚಲಿಸುತ್ತದೆ. ಬಹು ಉಪಯೋಗಿಯಾಗಿರುವ ಯಂತ್ರ ಮಲೆನಾಡಿಗೆ ಸೂಕ್ತವಾಗಿದೆ ಎಂದರು.
ಪ್ರಾತ್ಯಕ್ಷಿಕೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಸಿ.ಶಂಕರಪ್ಪ, ಕಲ್ಕುಳಿ ಚಂದ್ರಶೇಖರ ಹೆಗ್ಡೆ, ಪ್ರವೀಣ್, ಶ್ರೇಯಸ್, ಟಿ.ಕೆ.ಪರಾಶರ, ಸತೀಶ್, ಸೀತಾರಾಮ, ತೋಟದ ಕುಂಬ್ರಿ ಸತೀಶ್, ಅವಿನಾಶ್ ಇತರರಿದ್ದರು.