ಜಿಲ್ಲೆ

ಮಲೆನಾಡಿಗೆ ಮತ್ತೆ ಮಹಾ ನಂಜು

ಶಿವಮೊಗ್ಗ: ಉಡುಪಿ ಸೇರಿ ರಾಜ್ಯಾದ್ಯಂತ ತಲ್ಲಣಗೊಳಿಸುತ್ತಿರುವ ಮಹಾರಾಷ್ಟ್ರದ ನಂಜು ಇದೀಗ ಮಲೆನಾಡಿನತ್ತ ಮುಖ ಮಾಡಿದೆ. ಶಿವಮೊಗ್ಗದಲ್ಲೂ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಭಾನುವಾರ 12 ಮಂದಿಗೆ ಸೋಂಕು ದೃಢಪಡುವುದರೊಂದಿಗೆ ಸೋಂಕಿತರ ಸಂಖ್ಯೆ 65ಕ್ಕೆ ಏರಿದೆ. ಈ ಪೈಕಿ 22 ಮಂದಿಗೆ ಮಹಾರಾಷ್ಟ್ರದ ನಂಟಿರುವುದು ದೃಢಪಟ್ಟಿದೆ.

ಈ ಮೊದಲು ಜಿಲ್ಲೆಗೆ 10 ಮಂದಿ ಮಹಾರಾಷ್ಟ್ರದಿಂದ ಹಿಂದಿರುಗಿದವರಲ್ಲಿ ಸೋಂಕು ದೃಢಪಟ್ಟಿತ್ತು. ಅದರಲ್ಲಿ ಬಹಳಷ್ಟು ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದೀಗ ಮತ್ತೆ ಮಹಾರಾಷ್ಟ್ರದಿಂದ ಬಂದಿರುವ 12 ಮಂದಿಗೆ ಒಂದೇ ದಿನ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜಿಲ್ಲೆಯ ಜನರನ್ನು ಮಹಾ ಆತಂಕ ಕಾಡುವಂತಾಗಿದೆ.

ಇಡೀ ರಾಜ್ಯದಲ್ಲಿ ಮಹಾರಾಷ್ಟ್ರದಿಂದ ಬಂದವರಲ್ಲೇ ಸೋಂಕು ಹೆಚ್ಚಾಗುತ್ತಿದೆ. ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದರೂ ಸ್ಥಳೀಯರಲ್ಲಿ ಆತಂಕ ಮಾತ್ರ ಕಡಿಮೆ ಆಗುತ್ತಿಲ್ಲ. ಸೋಂಕಿತರ ಸಂಬಂಧಿಕರಲ್ಲೂ ಇದೀಗ ಆತಂಕ ಮನೆ ಮಾಡುತ್ತಿದೆ. ಇದರಿಂದ ಸಹಜವಾಗಿಯೇ ಸುತ್ತಲಿನ ಜನರು ಕರೊನಾ ಭಯದಲ್ಲೇ ಜೀವನ ನಡೆಸುವಂತಾಗಿದೆ.

7ರ ಬಾಲಕ ಸೇರಿ 12 ಮಂದಿಗೆ ಸೋಂಕು: ಕಳೆದ ಮೂರ್ನಾಲ್ಕು ದಿನಗಳಿಂದ ಕರೊನಾ ಪಾಸಿಟಿವ್ ಪ್ರಕರಣಗಳಿಲ್ಲದ ಮಲೆನಾಡು ಶಿವಮೊಗ್ಗದಲ್ಲಿ ಭಾನುವಾರ ರಿಪ್ಪನ್​ಪೇಟೆಯ 7 ವರ್ಷದ ಬಾಲಕ ಸೇರಿ ಬರೋಬ್ಬರಿ 12 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ 12 ಜನರು ಕೂಡ ಮಹಾರಾಷ್ಟ್ರದಿಂದ ಜೂ.3, 4 ಹಾಗೂ 5ರಂದು ಶಿವಮೊಗ್ಗಕ್ಕೆ ಬಂದು ಹೋಟೆಲ್ ಹಾಗೂ ವಸತಿ ನಿಲಯದಲ್ಲಿ ಕ್ವಾರಂಟೈನ್​ನಲ್ಲಿದ್ದರು. ಶಿಕಾರಿಪುರ ತಾಲೂಕಿನ 5, ಸೊರಬ ತಾಲೂಕಿನ 3, ಹೊಸನಗರ ತಾಲೂಕಿನ ರಿಪ್ಪನ್​ಪೇಟೆಯ ನಾಲ್ವರಿಗೆ ಸೋಂಕು ಪತ್ತೆಯಾಗಿದೆ.

ಸೋಂಕು ಪತ್ತೆ ಹಿನ್ನೆಲೆಯಲ್ಲಿ 12 ಜನರನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಅವರ ಕುಟುಂಬಸ್ಥರನ್ನೂ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 65ರಲ್ಲಿ 28 ಜನರು ಈಗಾಗಲೇ ಕರೊನಾದಿಂದ ಗುಣಮುಖರಾಗಿ ಹೋಮ್ ಕ್ವಾರಂಟೈನ್​ಗೆ ತೆರಳಿದ್ದಾರೆ. ಅದರಲ್ಲಿ 37 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಂದೇ ಕುಟುಂಬದ ನಾಲ್ವರು, ಶಿಕಾರಿಪುರದ ಎರಡು ಕುಟುಂಬಗಳ ಐವರು, ಸೊರಬ ತಾಲೂಕಿನ ಚಂದ್ರಗುತ್ತಿಗೆ ಒಂದೇ ಕುಟುಂಬದ ಮೂವರಲ್ಲಿ ಭಾನುವಾರ ಸೋಂಕು ದೃಢಪಟ್ಟಿದೆ.