ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರಬೆಟ್ಟದ ಮಾದಪ್ಪನ ಸನ್ನಿಧಿಗೆ ಸರ್ಕಾರಿ ಸರಣಿ ರಜೆಯ ಹಿನ್ನೆಲೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತಿದೆ.
ಮ.ಬೆಟ್ಟಕ್ಕೆ ಜಾತ್ರಾ ವೇಳೆ, ಹಬ್ಬ ಹರಿದಿನ, ಅಮಾವಾಸ್ಯೆ ಹಾಗೂ ಇನ್ನಿತರ ವಿಶೇಷ ದಿನಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವುದು ಸಾಮಾನ್ಯ. ಆದರೆ 2ನೇ ಶನಿವಾರ, ಭಾನುವಾರ ಹಾಗೂ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ರಜೆ ಸಿಕ್ಕಿರುವ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತಿದ್ದು, ಭಾನುವಾರ ಸಾವಿರಾರು ಭಕ್ತರು ಭೇಟಿ ನೀಡಿದ್ದರು. ಇದರಲ್ಲಿ ಬಹುತೇಕ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಅಧಿಕಾರಿಗಳು, ನೌಕರರು ಶಾಲೆಗೆ ಶಾಲೆ ಇರುವುದರಿಂದ ಮಕ್ಕಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಸೇರಿದಂತೆ ಕಾರು ಹಾಗೂ ಟೆಂಪೋ ಟ್ರಾವೆಲರ್ ಮೂಲಕ ಕುಟುಂಬ ಸಮೇತ ಭೇಟಿ ನೀಡುತ್ತಿದ್ದು, ಸೋಮವಾರವೂ ರಜೆ ಇರುವ ಕಾರಣ ಕೆಲ ಭಕ್ತರು ಮ.ಬೆಟ್ಟದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ದೇವರ ದರ್ಶನ ಪಡೆದ ಭಕ್ತರು: ಸಾವಿರಾರು ಭಕ್ತರು ಮ.ಬೆಟ್ಟಕ್ಕೆ ಆಗಮಿಸಿದ್ದ ಕಾರಣ ಭಾನುವಾರ ಬಹುತೇಕ ಭಕ್ತರು ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಕೆಲ ಭಕ್ತರು 500 ರೂ.ಟಿಕೆಟ್ ಪಡೆದು ರಾಜಗೋಪುರದ ವಿಶೇಷ ಕೌಂಟರ್ ಮೂಲಕ ತೆರಳಿ ದೇವರ ದರ್ಶನ ಪಡೆದರು. ಇನ್ನು ಬೆಳಗ್ಗೆ ಜರುಗಿದ ಬೆಳ್ಳಿ ತೇರಿನ ಉತ್ಸವದಲ್ಲಿ ಹೆಚ್ಚಿನ ಭಕ್ತರು ಭಾಗಿಯಾಗಿದ್ದರಲ್ಲದೇ ಹುಲಿ, ರುದ್ರಾಕ್ಷಿ, ಹಾಗೂ ಬಸವ ವಾಹನವನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸುವುದರ ಮೂಲಕ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಹರಕೆ ಹೊತ್ತ ಭಕ್ತರು ದಂಡಿನ ಕೋಲನ್ನು ಹೊತ್ತು ಸಾಗಿದರು. ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಜಯ ಘೋಷವನ್ನು ಕೂಗಿ ಭಕ್ತಿ ಭಾವವನ್ನು ಮೆರೆದರು. ಇನ್ನು ಆಗಮಿಸಿ ಕೆಲ ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆಯನ್ನು ನೆರವೇರಿಸುವ ಮೂಲಕ ಹರಕೆ ತೀರಿಸಿದರು. ಬಹುತೇಕ ಭಕ್ತರು ದೇಗುಲದ ಸುತ್ತಾ ಪ್ರದಕ್ಷಿಣೆಯೊಂದಿಗೆ ಧೂಪ ಹಾಕಿ, ಕರ್ಪೂರ ಹಚ್ಚಿ ಮಾದಪ್ಪನನ್ನು ನೆನೆದು ಕೈ ಮುಗಿದರು.