ಮಂಜುನಾಥ ಟಿ.ಭೋವಿ ಮೈಸೂರು
ಇಡೀ ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ್ದ ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಅಗಲಿ ಇಂದಿಗೆ (ಸೆ. 23) 48 ವರ್ಷ ಗತಿಸಿದೆ. ಆದಾಗ್ಯೂ ಅವರ ನೆನಪು, ಸಮಾಜ ಸುಧಾರಣಾ ಕಾರ್ಯಗಳು ಈಗಲೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ.
1399ರಲ್ಲಿ ಯದುರಾಯರಿಂದ ಸ್ಥಾಪಿಸಲಾದ ಮೈಸೂರು ಸಂಸ್ಥಾನ ಒಡೆಯರ್ ರಾಜಮನೆತನದಿಂದ ಆಳಲ್ಪಟ್ಟಿತು. 1565ರವರೆಗೆ ವಿಜಯನಗರ ಸಾಮ್ರ್ಯಾಜ್ಯದ ಸಾಮಂತ ರಾಜ್ಯವಾಗಿತ್ತು. 1565ರ ನಂತರ ವಿಜಯನಗರ ಸಾಮ್ರಾಜ್ಯದ ಅಳಿವಿನ ಜತೆಯಲ್ಲಿ ಮೈಸೂರು ಸಂಸ್ಥಾನವೂ ಸ್ವತಂತ್ರ ರಾಜ್ಯವಾಯಿತು. ಇದರ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಅವರು. ತಮ್ಮ ಸಂಸ್ಥಾನವನ್ನು ಸ್ವತಂತ್ರ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನ ಮಾಡಿದರು. ಈ ಮೂಲಕ ರಾಜಪ್ರಭುತ್ವದಿಂದ ಸುಲಭವಾಗಿ ಪ್ರಜಾಪ್ರಭುತ್ವ ಜಾರಿಗೆ ಅನುವು ಮಾಡಿಕೊಟ್ಟರು. ಇದರೊಂದಿಗೆ ಮೈಸೂರು ಸಂಸ್ಥಾನ ನೇಪಥ್ಯಕ್ಕೆ ಸರಿದು ರಾಜಾಳ್ವಿಕೆಯೂ ಕೊನೆಗೊಂಡಿತು.
ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಣೆ
ಜಯಚಾಮರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ 25ನೇ ಮಹಾರಾಜರು. 1919ರ ಜುಲೈ 18ರಂದು ಜನಿಸಿದ ಅವರು, 10 ವರ್ಷಗಳ ಕಾಲ ಮೈಸೂರು ರಾಜ್ಯವನ್ನು ಆಳಿದರು. 1940ರಿಂದ 1950ರ ವರೆಗೆ ಆಳ್ವಿಕೆ ನಡೆಸಿದ ಹಿರಿಮೆ ಅವರದು. 1950ರಲ್ಲಿ ಭಾರತವು ಗಣರಾಜ್ಯವಾದಾಗ ಅವರ ಅರಸೊತ್ತಿಗೆ ಕಳೆದು ಹೋದರೂ 1956ರವರೆಗೆ ಮೈಸೂರು ರಾಜ್ಯದ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು. 1956ರಲ್ಲಿ ಕರ್ನಾಟಕ ರಾಜ್ಯ ಸ್ಥಾಪನೆಯಾದಾಗ ಪ್ರಥಮ ರಾಜ್ಯಪಾಲರಾಗಿಯೂ ಕರ್ತವ್ಯ ನಿರ್ವಹಿಸಿದರು. ಈ ಸಮಯದಲ್ಲಿ ಅವರು ಸಂಬಳವನ್ನು ಸ್ವೀಕರಿಸಲಿಲ್ಲ ಎಂಬುದು ವಿಶೇಷ. ಸ್ವಲ್ಪ ಸಮಯ ಮದ್ರಾಸ್ ರಾಜ್ಯದ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದರು. ಬಳಿಕ ಜನಸಾಮಾನ್ಯರಂತೆ ಜೀವನ ನಡೆಸಿದರು.
ಸಂಸ್ಥಾನದ ಯುಗಾಂತ್ಯ:
1974 ಸೆಪ್ಟೆಂಬರ್ 23ರಂದು ಜಯಚಾಮರಾಜ ಒಡೆಯರ್ ಅವರು ಬೆಂಗಳೂರಿನ ಅರಮನೆಯಲ್ಲಿ ಕೇವಲ 55ನೇ ವಯಸ್ಸಿನಲ್ಲಿ ನಿಧನರಾದರು. ಬೆಂಗಳೂರಿನಿಂದ ಮೈಸೂರಿಗೆ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ತರಲಾಯಿತು. ಆ ವೇಳೆ ಕೊನೆಯ ಮಹಾರಾಜರ ಅಂತಿಮ ದರ್ಶನಕ್ಕಾಗಿ ಮೈಸೂರು ಅರಮನೆ ಆವರಣದಲ್ಲಿ ನಾಡಿನ ಸಹಸ್ರಾರು ಜನರು ನೆರೆದಿದ್ದರು. ಶೋಕಸಾಗರ ಮತ್ತು ಕಂಬನಿಯ ನಡುವೆ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕೊಂಡೊಯ್ದು ರಾಜವಂಶಸ್ಥರ ಸಮಾಧಿ ಸ್ಥಳ ‘ಮಧುವನ’ದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಇದರೊಂದಿಗೆ ಮೈಸೂರು ಸಂಸ್ಥಾನದ ಯುಗ ಅಸ್ತಂಗತವಾಯಿತು ಎಂದು ಇತಿಹಾಸಕಾರರು ಮತ್ತು ಹಿರಿಯರು ಸ್ಮರಿಸಿಕೊಳ್ಳುತ್ತಾರೆ.
ಅಖಂಡ ಕರ್ನಾಟಕದ ಪ್ರತಿಪಾದಕರು:
ಜಯಚಾಮರಾಜ ಒಡೆಯರ್ ಅವರು ಕಂಠೀರವ ನರಸಿಂಹರಾಜ ಒಡೆಯರ್ ಹಾಗೂ ಕೆಂಪು ಚೆಲುವಾಜಮ್ಮಣ್ಣಿ ದಂಪತಿಯ ಪುತ್ರರು. ಇವರ ದೊಡ್ಡಪ್ಪ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಸಂಸ್ಥಾನದ ರಾಜರಾಗಿದ್ದರು. ಆದರೆ ಅವರಿಗೆ ಸಂತಾನ ಭಾಗ್ಯ ಇರಲಿಲ್ಲ. ಆದ್ದರಿಂದ ನಾಲ್ವಡಿಯವರು ತಮ್ಮ ಸಹೋದರ ಕಂಠೀರವ ನರಸಿಂಹರಾಜರ ಪುತ್ರ ಜಯಚಾಮರಾಜ ಒಡೆಯರ್ ಅವರನ್ನು ದತ್ತು ಸ್ವೀಕರಿಸಿದ್ದರು.
1940ರ ಸೆಪ್ಟೆಂಬರ್ 8ರಂದು ಮೈಸೂರು ಸಂಸ್ಥಾನದ ಮಹಾರಾಜರಾಗಿ ಪಟ್ಟಾಭಿಷೇಕರಾದ ಜಯಚಾಮರಾಜ ಒಡೆಯರ್, ಮೊದಲಿನಿಂದಲೂ ಅಖಂಡ ಕರ್ನಾಟಕದ ಪ್ರತಿಪಾದಕರಾಗಿದ್ದರು. ಅದನ್ನು ನನಸಾಗಿಸಲು ರಾಜ ಪದವಿ ತ್ಯಜಿಸಿದರು. ಅವರು ಸಂಗೀತ ಆರಾಧಕರಾಗಿದ್ದರು. ಅವರ ಕಾಲದಲ್ಲಿ ಲಲಿತಕಲೆಗಳಿಗೆ ವಿಶೇಷ ಪ್ರೋತ್ಸಾಹ ದೊರೆಯುತ್ತಿತ್ತು. ಜಯಚಾಮರಾಜ ಗ್ರಂಥಮಾಲಾ ಎಂಬ ಯೋಜನೆ ಕಾರ್ಯರೂಪಕ್ಕೆ ತಂದು, ಬೇರೆ ಭಾಷೆಗಳಲ್ಲಿದ್ದ ವೇದಶಾಸ್ತ್ರ, ಪುರಾಣ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಗೊಳಿಸಿದರು. ಅದಕ್ಕಾಗಿ ಹಲವಾರು ಪ್ರಸಿದ್ಧ ಕನ್ನಡ ಪಂಡಿತರನ್ನು ಅನುವಾದಕರಾಗಿ ನಿಯೋಜಿಸಿದ್ದರು.
ಅಪಾರ ಕೊಡುಗೆ:
ಜಯಚಾಮರಾಜ ಒಡೆಯರ್ ಅವರಿಗೆ ಚರಿತ್ರೆ, ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯಗಳಲ್ಲಿ ವಿಶೇಷ ಆಸಕ್ತಿ ಇತ್ತು. ಉತ್ತಮವಾಗಿ ಕುದುರೆ ಸವಾರಿ ಮಾಡುತ್ತಿದ್ದರು. ಟೆನಿಸ್ ಆಟವನ್ನೂ ಆಡುತ್ತಿದ್ದರು. ಅರಮನೆಯಲ್ಲಿ ಉತ್ತಮ ಗ್ರಂಥ ಭಂಡಾರವನ್ನು ನಿರ್ಮಾಣ ಮಾಡಿದ್ದರು. ಉತ್ತಮ ಪುಸ್ತಕಗಳನ್ನು ಓದುವುದು ಅವರ ಹವ್ಯಾಸವಾಗಿತ್ತು. ವಿಚಾರಪೂರ್ಣ ಭಾಷಣ ಮಾಡುತ್ತಿದ್ದರು. ಪ್ರಾಣಿ-ಪಕ್ಷಿಗಳ ಮೇಲೆ ಪ್ರೀತಿ ಹೊಂದಿದ್ದರು. ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಅವರ ಕೊಡುಗೆ ಅಪಾರ.
ಕೇಂದ್ರೀಯ ಆಹಾರ ಸಂಶೋಧನಾಲಯ, ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಗಳಿಗೆ ಅವರು ತಮ್ಮ ಅಧೀನದ ಕಟ್ಟಡಗಳನ್ನು ದಾನವಾಗಿ ನೀಡಿದರು. ತಲೆತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದ ಮೈಸೂರಿನ ಜಂಬೂಸವಾರಿ, ಆಯುಧಪೂಜೆ, ವಿಜಯದಶಮಿ ಮಹೋತ್ಸವವನ್ನು ಇನ್ನಷ್ಟು ಆಕರ್ಷಕವಾಗಿ ನಡೆಸಿ, ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಿದರು. ಅವರ ಕಾಲದಲ್ಲಿ ದೇವಾಲಯಗಳಲ್ಲಿ ಹಿಂದುಳಿದ ಜಾತಿಯವರಿಗೆ ಪ್ರವೇಶ ನೀಡಲಾಯಿತು. ಕೈದಿಗಳ ಮನಪರಿವರ್ತನೆಗೆ ಕಾರ್ಯಕ್ರಮ ರೂಪಿಸಲಾಯಿತು. ಹಿಂದುಳಿದ ಲಂಬಾಣಿ ಸಮುದಾಯಕ್ಕೆ ರಾಜಸಂಸ್ಥಾನದಲ್ಲಿ ಗೌರವ ನೀಡಿದ್ದರು. ಹೀಗಾಗಿ, ಅವರು ಮೈಸೂರು ಸಂಸ್ಥಾನಕ್ಕೆ ಹಾಗೂ ನಂತರದ ದಿನಗಳಲ್ಲಿ ಅಖಂಡ ಕರ್ನಾಟಕಕ್ಕೆ ಸಲ್ಲಿಸಿದ ಸೇವೆ ಸದಾಕಾಲ ಸ್ಮರಣೀಯ.
ಪ್ರತಿಮೆ ಸ್ಥಾಪನೆ:
ಜಯಚಾಮರಾಜ ಒಡೆಯರ್ ಅವರ ಸೇವೆ ಸ್ಮರಿಸಲು ಮೈಸೂರಿನ ಹಾರ್ಡಿಂಜ್ ವೃತ್ತದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಜಯಚಾಮರಾಜ ಒಡೆಯರ್ ಪ್ರತಿಮೆ ಸ್ಥಾಪನೆ ಮಾಡಲಾಯಿತು. ಬಳಿಕ ಆ ವೃತ್ತಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಯಿತು.
ಬ್ರಿಟನ್ ರಾಣಿಗೆ ಸ್ವಾಗತ:
ಇತ್ತೀಚೆಗೆ ನಿಧನರಾದ ಬ್ರಿಟನ್‌ನ ರಾಣಿ 2ನೇ ಎಲಿಜಬತ್ ಅವರು 1961ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದರು. ಆಗ ಅಂದಿನ ರಾಜ್ಯಪಾಲರಾಗಿದ್ದ ಜಯಚಾಮರಾಜ ಒಡೆಯರ್ ಅವರು ರಾಣಿಯನ್ನು ಆತ್ಮೀಯವಾಗಿ ಸ್ವಾಗತಿಸಿದ್ದರು. ಅಲ್ಲದೆ, ಕಾರಿನಲ್ಲಿ ರಾಣಿಯ ಪಕ್ಕ ಕುಳಿತುಕೊಳ್ಳುವ ಅವಕಾಶ ಭಾರತದಲ್ಲಿ ಅವರಿಗೆ ಮಾತ್ರ ದೊರೆತಿತ್ತು. ಆ ಕಾಲದಲ್ಲಿದ್ದ ಅಂದಾಜು 500 ರಾಜರು, ರಾಜವಂಶಸ್ಥರಿಗೆ ಈ ಅವಕಾಶ ದೊರೆತಿರಲಿಲ್ಲ. ಈ ಸಂಬಂಧಿತ ಫೋಟೋ, ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು.
ಜಯಚಾಮರಾಜ ಒಡೆಯರ್ ಅವರು ಕೊನೆಯ ದಿನಗಳಲ್ಲಿ ಸಾಮಾನ್ಯ ಜೀವನ ನಡೆಸಿದ್ದು ವಿಶೇಷ. ಸಾಮಾನ್ಯ ವ್ಯಕ್ತಿ ರಾಜನಾಗಿ ಅಧಿಕಾರದಲ್ಲಿ ಮೆರೆದಿದ್ದಾರೆ. ಆದರೆ, ಅವರು ರಾಜನಾಗಿ ಆಳ್ವಿಕೆ ನಡೆಸಿ ಸಾಮಾನ್ಯ ವ್ಯಕ್ತಿಯಾಗಿ ಅಧಿಕಾರ ಚಲಾಯಿಸಿದ್ದರು. ಅಂತಿಮ ದಿನಗಳನ್ನು ಅವರು ಕೋರ್ಟ್‌ನಲ್ಲೇ ಕಳೆದರು. ನಂಬಿದವರು ಮೋಸ ಮಾಡಿದರು, ವಿವಿಧ ಭೂ ವ್ಯಾಜ್ಯಗಳನ್ನು ಬಗೆಹರಿಸಲು ಹೈರಾಣರಾಗಿ ಹೋಗಿದ್ದರು.ತಲಕಾಡು ಚಿಕ್ಕರಂಗೇಗೌಡ, ಇತಿಹಾಸ ತಜ್ಞ