ಆಲೂರು: ಹೇಮಾವತಿ ಮರುವಸತಿ ಸಂತ್ರಸ್ತ ಕುಟುಂಬಗಳಿಗೆ ಜಮೀನು ನೀಡಿ 50 ವರ್ಷ ಕಳೆದರೂ ಅಧಿಕಾರಿಗಳು ಜಮೀನಿಗೆ ದುರಸ್ತಿ, ಪಕ್ಕಪೋಡು ಮಾಡಿಕೋಡದೆ ಸತಾಯಿಸುತ್ತಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಸಂತ್ರಸ್ತರು ಬುಧವಾರ ಪಟ್ಟಣದ ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿದರು.
ಸುಮಾರು 50 ವರ್ಷಗಳ ಹಿಂದೆ ಹೇಮಾವತಿ ಅಣೆಕಟ್ಟು ಕಟ್ಟುವ ಸಲುವಾಗಿ ತಾಲೂಕಿನ ಪೊನ್ನನಾಥಪುರ, ಗೊದ್ದನಕೊಪ್ಪಲು, ಕಬ್ಬಾರ್ಲೆ, ದಾಸೇಗೌಡನಕೊಲಪ್ಪಲು, ಕಾಕನಹಳ್ಳಿ, ಹೊಳೆಮಾರನಹಳ್ಳಿ, ಮಳಲಹಳ್ಳಿ ಸೇರಿದಂತೆ ಸುಮಾರು 48 ಗ್ರಾಮಗಳನ್ನು ಸ್ಥಳಾಂತರ ಮಾಡಿ ಬ್ಯಾಬ ಕಾವಲಿನಲ್ಲಿ ಸುಮಾರು 300ಕ್ಕೂ ಹೆಚ್ಚು ಸಂತ್ರಸ್ತ ಕುಟುಂಬಗಳಿಗೆ 1300 ಎಕರೆಗೂ ಹೆಚ್ಚು ಜಮೀನು ನೀಡಿ ಮರುವಸತಿ ಕಲ್ಪಿಸಲಾಗಿತ್ತು. ಅದರೆ ಜಮೀನು ನೀಡಿ 50 ವರ್ಷ ಕಳೆದರೂ ದುರಸ್ತಿ, ಪಕ್ಕಪೋಡು ಮಾಡಿಕೋಡದೆ ಕತ್ತಲೆ ಕೋಣೆಯಲ್ಲಿ ಇಟ್ಟು ನಮಗೆ ಅನ್ಯಾಯವೆಸಗುತ್ತಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರಿಗೆ ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಸಕರು ಒಂದು ಬಾರಿಯೂ ಸದನದಲ್ಲಿ ಮಾತನಾಡಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಹಿರಿಯ ಮುಖಂಡ ಸಿಮೆಂಟ್ ಮಂಜು ಮಾತನಾಡಿ, ಹೇಮಾವತಿ ಅಣೆಕಟ್ಟು ಕಟ್ಟುವ ಸಲುವಾಗಿ ಹಾಸನ, ತುಮಕೂರು ಜಿಲ್ಲೆಗಳ ಜನರಿಗಾಗಿ ಜನರು ಫಲವತ್ತಾದ ಭೂಮಿಯನ್ನು ಬಿಟ್ಟುಕೊಟ್ಟು ಸರ್ಕಾರ ನೀಡಿದ ಬ್ಯಾಬ ಫಾರೆಸ್ಟ್‌ನಲ್ಲಿ ಗೆಡ್ಡೆ ಕಿತ್ತು ಕಷ್ಟದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.
ಅದರೆ ಅಧಿಕಾರಿಗಳು ಇದುವರೆಗೂ ಅವರ ಜಮೀನಿಗೆ ಸಂಬಂಧಪಟ್ಟಂತೆ ದುರಸ್ತಿ, ಪಕ್ಕ ಪೋಡು ಮಾಡಿಕೊಟ್ಟಿಲ್ಲ. ಇದರಿಂದ ಮಕ್ಕಳ ಹೆಸರಿಗೆ ಜಮೀನು ಪರಭಾರೆ, ಮಾರಾಟ ಮಾಡಲು ಸಾದ್ಯವಾಗುತ್ತಿಲ್ಲ. ಮತ ಪಡೆದ ಜನಪ್ರತಿನಿಧಿಗಳು ಕೇವಲ ಹಣ ಮಾಡುವ ಕಡೆ ಗಮನಹರಿಸುತ್ತಿದ್ದಾರೆ. ಅದನ್ನು ಬಿಟ್ಟು ಅವರ ಹಿತ ಕಾಯಬೇಕಾದ್ದು ಅವರ ಜವಾಬ್ದಾರಿ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಅವರ ಜಮೀನುಗಳಿಗೆ ಸರಿಯಾದ ದಾಖಲೆಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ನಂತರ ಶಿರಸ್ತೇದಾರ್ ಅಶೋಕ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಬೈರಾಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಗಣೇಶ್, ವಕೀಲ ಮೋಹನ್, ರುದ್ರೇಗೌಡ, ವಕೀಲ ಮಂಜೇಗೌಡ, ಕೃಷ್ಣೇಗೌಡ, ರಂಗಯ್ಯ, ಜಯರಾಂ, ಶಿವಸಾಗರ ಧರ್ಮಪ್ಪ, ಮುಖಂಡ ಲೋಕೇಶ್ ದೊಡ್ಡ ಕಣಗಾಲು ಮತ್ತಿತರರು ಪಾಲ್ಗೊಂಡಿದ್ದರು.