ಜಿಲ್ಲೆ

ಮರುಳಸಿದ್ದೇಶ್ವರ ಪಲ್ಲಕ್ಕಿ ಮಹೋತ್ಸವಕ್ಕೆ ಅದ್ದೂರಿ ಚಾಲನೆ

ಉಜ್ಜಿನಿ: ಭರತ ಹುಣ್ಣಿಮೆ ಪ್ರಯುಕ್ತ ಉಜ್ಜಿನಿ ಜಗದ್ಗುರು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಅವರ ವಿಜಯಯಾತ್ರೆ ಮಂಗಳವಾರ ಸಂಜೆ ಆರಂಭಗೊಂಡಿತು. ಉಜ್ಜಿನಿ ಪಾದಗಟ್ಟೆ ಪ್ರದಕ್ಷಿಣೆ ನಂತರ ಯಾತ್ರೆ ಒಂಬತ್ತು ಪಾದಗಟ್ಟೆಗಳಿಗೆ ಭೇಟಿ ನೀಡಲಿದೆ.

ಸಿದ್ದನವರ್ತಿ ವಟವೃಕ್ಷದ ಹತ್ತಿರ ಆಗಮಿಸಿದ ನಂತರ ಬೆಳದೇರಿ, ನಾಗೇನಹಳ್ಳಿ, ಬೆನಕನಹಳ್ಳಿ, ಸೊಕ್ಕೆಪಾದ, ಉಜ್ಜಿನಿಯ ಮೂಗಣ್ಣ ಗುಡ್ಡಕ್ಕೆ ತೆರಳಿ ನಂತರ ಕಾಳಾಪುರ ಗ್ರಾಮಕ್ಕೆ ಭೇಟಿ ನೀಡಿತು. ಅಲ್ಲಿಂದ ನಡುಮಾವಿನಹಳ್ಳಿ ,ಹಾರಕನಾಳು ಗ್ರಾಮದ ಮೂಲಕ ಉಜ್ಜಿನಿ ಹೊರ ವಲಯದ ಕಾಶಿ ಬಸಪ್ಪ ದೇವಸ್ಥಾನಕ್ಕೆ ಗುರುವಾರ ಆಗಮಿಸಲಿದೆ.

ಪೀಠದಲ್ಲಿ ಧರ್ಮ ಕಾರ್ಯಗಳು, ಹರಕೆ ಗುಡಿಯಲ್ಲಿ ಹೋಮ, ಕುಂಟ ಬಸವಣ್ಣನ ಸಮ್ಮುಖದಲ್ಲಿ ರೇಣುಕಾ ಪುರಾಣ ಪ್ರವಚನ ನಡೆದವು. ಬಸವಣ್ಣನ ಕಾಲು ಕುಂಟಾಗಿರುವುದರಿಂದ ಜಗದ್ಗುರು ಸಿದ್ದೇಶ್ವರರು ಕುದುರೆ ಏರಿ ದಿಗ್ವಿಜಯಕ್ಕೆ ಹೋಗಿರುತ್ತಾರೆ. ಅದಕ್ಕಾಗಿ ಈ ಹಬ್ಬದಲ್ಲಿ ಕುದುರೆಗೆಂದು ಹುರುಳಿಗುಗ್ಗರಿ, ಬೆಲ್ಲದೊಂದಿಗೆ ನೈವೇದ್ಯ ನಡೆಯುತ್ತದೆ. ಹೋಮ ಮಾಡಿದ ಕಜ್ಜಲವನ್ನು ಪುರೋಹಿತರು ತಮ್ಮ ವಶಕ್ಕೆ ಇಟ್ಟುಕೊಂಡಿರುತ್ತಾರೆ.

ವಿಜಯಯಾತ್ರೆ ಮುಗಿಸಿಕೊಂಡು ಬರುವ ಸ್ವಾಮಿಗೆ ಭಕ್ತರು ಮೊಳಕೆಕಾಳಿನ ಆರತಿ, ಪಂಚಾರತಿ, ಸೂರುಭಾನದಾರತಿ, ಕಳಸ ಮುಂತಾದ ಆರತಿಗಳನ್ನು ತರುತ್ತಾರೆ. ತಳವಾರ, ಆದಿಕರ್ನಾಟಕ ಸಮುದಾಯದವರು ಮೊದಲು ಆರತಿ ತರುತ್ತಾರೆ. ನಂತರ ಇತರರ ಆರತಿಗಳನ್ನು ಪೂಜಾರಿಗಳು ಭಕ್ತರಿಂದ ಪಡೆದುಕೊಂಡು ಭಕ್ತಿಪೂರ್ವಕವಾಗಿ ಸುಮುಖೋ ಮಹಾದೇವ ಮರುಳಸಿದ್ದೇಶ್ವರ ಸುಮುಖೋ ಎಂದು ಪ್ರತಿ ಬಾರಿ ಆರತಿ ಬೆಳಗಿದಾಗ ಘೋಷಿಸುತ್ತಾರೆ.

ಆರತಿಯ ನಂತರ ಮೂರ್ತಿಯು ಆವರಣದೊಳಗೆ ಪ್ರವೇಶಿಸುತ್ತದೆ. ದೇವಾಲಯದ ಪಶ್ಚಿಮ ದ್ವಾರಕ್ಕೆ ಸ್ವಾಮಿ ಬಂದಾಗ ಪೂಜಾರಿಗಳು ಹೋಮ ಕಜ್ಜಲವನ್ನು ತಂದು ಸ್ವಾಮಿಗೆ ಲೇಪನ ಮಾಡಿ ದೃಷ್ಟಿ ತೆಗೆದು ಉಳಿದ ಕಜ್ಜಲವನ್ನು ಪಲ್ಲಕ್ಕಿಯಲ್ಲಿ ಇಡುತ್ತಾರೆ. ಪಲ್ಲಕ್ಕಿಯಲ್ಲಿಟ್ಟ ಕಜ್ಜಲವನ್ನು ಅಪಹರಿಸಲು ಕೆಲವರು ದುಷ್ಟಶಕ್ತಿಯ ವೇಷ ಧರಿಸಿ ಬರುತ್ತಾರೆ. ಆಗ ಪೂಜಾರಿಗಳು ಉಪಾಯದಿಂದ ಕಜ್ಜಲವನ್ನು ದೇವಸ್ಥಾನದೊಳಗೆ ಒಯ್ಯುತ್ತಾರೆ.

ಪವಿತ್ರವಾದ ಈ ಕಜ್ಜಲ ದ್ರವ್ಯವನ್ನು ಬಾಲಗ್ರಹ ದೋಷವುಳ್ಳ ಮಕ್ಕಳಿಗೆ ಲೇಪಿಸುವುದರಿಂದ ದೋಷ ಪರಿಹಾರವಾಗುತ್ತದೆ ಎಂಬುದು ಪ್ರತೀತಿ. ಗುರುವಾರ ಬೆಳಗಿನ ಜಾವ ಮಂಗಳಾರತಿಯೊಂದಿಗೆ ಮೂರ್ತಿಯು ಹುಣ್ಣಿಮೆ ಮುಗಿಯುವ ರಾಜಯೋಗದಲ್ಲಿ ದೇವಾಲಯವನ್ನು ಪ್ರವೇಶಿಸುವುದರ ಮುಖಾಂತರ ಈ ಹಬ್ಬ ಸಂಪನ್ನವಾಗುತ್ತದೆ.