ಜಿಲ್ಲೆ

ಮರುಜನ್ಮ ಪಡೆದ ಗರ್ಭಿಣಿ ಆಕಳು

ಹುಬ್ಬಳ್ಳಿ: ಕರೊನಾದಿಂದಾಗಿ ಯಾವುದಕ್ಕೂ ಗಮನ ಕೊಡಲು ಸಾಧ್ಯವಾಗದ ಈ ಸಂದರ್ಭದಲ್ಲಿ ಅಪಾಯದಲ್ಲಿದ್ದ ಅನಾಥ ಗೋವಿಗೆ ಪಶು ವೈದ್ಯರು ಮರುಜನ್ಮ ನೀಡುವ ಮೂಲಕ ಪ್ರಾಣಿದಯೆ ಮೆರೆದ ಪ್ರಸಂಗ ನಗರದಲ್ಲಿ ಶನಿವಾರ ನಡೆದಿದೆ.

ಉಣಕಲ್ಲ ಗ್ರಾಮದ ಪಶುವೈದ್ಯರು ಮೃತ್ಯುವಿನ ಬಾಗಿಲು ತಟ್ಟಿದ್ದ ಅನಾಥ ಗರ್ಭಿಣಿ ಹಸುವಿಗೆ ಚಿಕಿತ್ಸೆ ನೀಡಿ ಮತ್ತೆ ಎದ್ದು ನಿಲ್ಲುವಂತೆ ಮಾಡಿದ ಹೃದಯ ರ್ಸ³ ಕಾರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಉಣಕಲ್ ಕ್ರಾಸ್ ರಾಮಲಿಂಗೇಶ್ವರ ದೇವಸ್ಥಾನದ ಬಯಲಿನಲ್ಲಿ ಪರಸ್ಪರ ಕಾದಾಡುತ್ತ ಬಂದ ನಾಲ್ಕಾರು ದನಗಳು ತುಂಬು ಗರ್ಭಿಣಿ ಹಸುವೊಂದನ್ನು ಕೆಳಗೆ ಬೀಳಿಸಿ ದಾಳಿ ನಡೆಸಿ, ಇರಿದು ಅದರ ಹೊಟ್ಟೆಗೆ ಗಾಯಗೊಳಿಸಿದ್ದವು. ಪ್ರಜ್ಞೆ ತಪ್ಪಿದ್ದ ಹಸು ನರಳುತ್ತ ಬಯಲಿನಲ್ಲಿ ಬಿದ್ದಿತ್ತು, ಅದೇ ಮಾರ್ಗವಾಗಿ ಹೊರಟಿದ್ದ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ ಹಾಗೂ ಸಂಗಡಿಗರು ಹಸುವಿನ ಸ್ಥಿತಿ ಕಂಡು ಉಪಚಾರಕ್ಕೆ ಮುಂದಾದರು.

ತಕ್ಷಣ ಉಣಕಲ್ ಪಶುವೈದ್ಯರನ್ನು ಕರೆಸಿ ಪರಿಸ್ಥಿತಿ ವಿವರಿಸಿದಾಗ, ಗರ್ಭದಲ್ಲಿರುವ ಕರು ಸತ್ತಿದ್ದು ಹಸುವನ್ನು ಉಳಿಸುವ ಪ್ರಯತ್ನ ನಡೆಸುವುದಾಗಿ ಹೇಳಿದರು. ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದಾಗ ಹಸುವನ್ನು ಟಂಟಂ ವಾಹನದ ಮೂಲಕ ಸಿದ್ಧಪ್ಪಜ್ಜನ ಹೊಸಮಠದ ಆವರಣಕ್ಕೆ ಸ್ಥಳಾಂತರಿಸಲಾಯಿತು. ಮಧ್ಯಾಹ್ನದಿಂದ ಸಂಜೆಯವರೆಗೆ ಉಣಕಲ್ ಹಾಗೂ ಹುಬ್ಬಳ್ಳಿ ಪಶುವೈದ್ಯರ ತಂಡ ಪರಿಶ್ರಮಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿತು.

ಹೊಟ್ಟೆಯಲ್ಲಿ ಸತ್ತುಹೋದ ಕರುವನ್ನು ಹೊರತೆಗೆದು ಹೊಲಿಗೆ ಹಾಕಿ ಅಗತ್ಯ ಔಷಧ ನೀಡಲಾಯಿತು. ಪಶುವೈದ್ಯರ ತಂಡದ ಶ್ರಮ, ಉಣಕಲ್ ಗ್ರಾಮಸ್ಥರ ಸಹಕಾರ, ದೇವರ ಅನುಗ್ರಹದಿಂದ ಹಸು ಚೇತರಿಕೊಂಡು ಎದ್ದುನಿಂತಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಡಾ. ಈರಣ್ಣ ಸುಂಕದ, ಡಾ. ಶರಣು ಬದಾಮಿ, ಡಾ. ಹೊನ್ನಿನಾಯ್ಕರ, ಸಿಬ್ಬಂದಿ ಕೆ.ಬಿ. ಹುಬ್ಬಳ್ಳಿ, ಮೌನೇಶ ಹಾಗೂ ಎಸ್.ಕೆ. ಗೌಡರ ಶಸ್ತ್ರ ಚಿಕಿತ್ಸೆ ನೆರೆವೇರಿಸಿದರು. ಉಣಕಲ್ ಗ್ರಾಮದ ಹಿರಿಯರಾದ ಮೂರುಸಾವಿರಪ್ಪ ಕೊರವಿ ಸೇರಿ ಗಣ್ಯರು, ಯುವಕರು ಅಗತ್ಯ ಸಹಕಾರ ನೀಡಿ ಗೋಮಾತೆಯನ್ನು ಉಳಿಸಿಕೊಂಡಿದ್ದಾರೆ.