ಕೋಲಾರ: ನಷ್ಟದಿಂದಾಗಿ ಮುಚ್ಚಿರುವ ಕೆಜಿಎಫ್ ಚಿನ್ನದ ಗಣಿಯನ್ನು 20 ವರ್ಷಗಳ ಬಳಿಕ ಮರು ಸ್ಥಾಪಿಸುವ ಪ್ರಯತ್ನದ ಭಾಗವಾಗಿ ಕೇಂದ್ರ ಸರ್ಕಾರ ಚಿನ್ನ ನಿಕ್ಷೇಪ ಶೋಧಕ್ಕೆ ಮುಂದಾಗಿರುವುದು ಚಿನ್ನದ ನಾಡು ಕೋಲಾರ ಎಂದು ಹೆಮ್ಮೆ ಪಡುವ ಜನತೆಯಲ್ಲಿ ಹೊಸ ಭರವಸೆ ಹುಟ್ಟು ಹಾಕಿದೆ.
ಗಣಿಯ ಗತ ವೈಭವ ಮರುಕಳಿಸಲು, ಕೆಜಿಎಫ್ ಕೈಗಾರಿಕೆ ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಲು ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಜತೆಗೆ ಕಾಲಮಿತಿಯಲ್ಲಿ ಯೋಜನೆಗಳಿಗೆ ಚಾಲನೆ ಸಿಗುವಂತೆ ಮಾಡಿದಲ್ಲಿ ಕರ್ನಾಟಕದ ಪಾಲಿಗೆ ಕೆಜಿಎಫ್ ದೊಡ್ಡ ಕೈಗಾರಿಕಾ ಕಾರಿಡಾರ್ ಆಗುವುದರಲ್ಲಿ ಅನುಮಾನವಿಲ್ಲ.
ಗಣಿಯ ಇತಿಹಾಸ: 1880ರಲ್ಲಿ ಜಾನ್ ಟೈಲರ್ ಕಂಪನಿಯ 4594.42 ಲಕ್ಷ ರೂ. ಬಂಡವಾಳದೊಂದಿಗೆ ಆರಂಭವಾದ ಚಿನ್ನದ ಗಣಿಯಲ್ಲಿ 12,000 ಕಾರ್ಮಿಕರಿಗೆ ಕೆಲಸ ಸಿಕ್ಕಿತ್ತು. ಕಂಪನಿ ಕೆಜಿಎಫ್‌ನಲ್ಲಿ ಚಿನ್ನ ನಿಕ್ಷೇಪಕ್ಕೆ ಕೈ ಹಾಕದಿದ್ದಲ್ಲಿ ಗಣಿ ಇತಿಹಾಸ ಬದಲಾಗುತ್ತಿತ್ತು. ಮೈಸೂರು ಸರ್ಕಾರದ ಸಹಕಾರದಿಂದ 1885ರಲ್ಲಿ ಗಣಿ ಯಶಸ್ಸು ಕಾಣುವಂತಾಯಿತು. ಇದರಿಂದ ಸರ್ಕಾರಕ್ಕೆ ವರ್ಷಕ್ಕೆ 33368 ರೂ. ರಾಜಧನ ಸಿಕ್ಕಿತು.
ಮೈಸೂರು ಸರ್ಕಾರದಿಂದ ಸಹಕಾರ: 1880ರಿಂದ 1956ರವರೆಗೆ ಜಾನ್ ಟೈಲರ್ ವಶದಲ್ಲಿದ್ದ ಗಣಿಯನ್ನು ಮೈಸೂರು ಸರ್ಕಾರದ ಕೋರಿಕೆ ಮೇರೆಗೆ ರಾಷ್ಟ್ರೀಕರಣಗೊಳಿಸಲಾಯಿತು. ಆಗಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಗಣಿಯನ್ನು ಸರ್ಕಾರದ ವಶಕ್ಕೆ ಪಡೆದು ಉತ್ಪಾದನೆ ಹೆಚ್ಚಳಕ್ಕೆ ಉತ್ತೇಜನ ನೀಡಿದರು. ರಾಷ್ಟ್ರೀಕರಣ ನಂತರ 1000 ಕಾರ್ಮಿಕರನ್ನು ನೇಮಿಸಿದ್ದರಿಂದ 12000 ಇದ್ದ ಕಾರ್ಮಿಕರ ಸಂಖ್ಯೆ 13,000 ಆಯಿತು. ಗಣಿಯಲ್ಲಿ ವೈಜ್ಞಾನಿಕವಾಗಿ ಚಿನ್ನ ಉತ್ಪಾದನೆಗೆ ಮುಂಚೆ 6.2 ಮೆಟ್ರಿಕ್ ಟನ್ ಚಿನ್ನ ಉತ್ಪಾದನೆ ಮಾಡಲಾಗುತ್ತಿತ್ತು. ರಾಷ್ಟ್ರೀಕರಣ ನಂತರ ಸರ್ಕಾರಕ್ಕೆ ಪ್ರತಿವರ್ಷ 25 ಕೋಟಿ ರೂ. ರಾಜಧನದ ಜತೆಗೆ ವಿದ್ಯುತ್ ಕರವಾಗಿ 30 ಲಕ್ಷ ರೂ. ಖಜಾನೆಗೆ ಬರುತ್ತಿತ್ತು.
ಗಣಿ ಶತಮಾನೋತ್ಸವ: 1962ರಲ್ಲಿ ಗಣಿಯನ್ನು ಕೇಂದ್ರ ಸರ್ಕಾರಕ್ಕೆ ವಹಿಸಲಾಯಿತು. 1980ರಲ್ಲಿ ಗಣಿ ಶತಮಾನೋತ್ಸವ ನಡೆಯಿತು. ಆಗಿನ ಪ್ರಧಾನಿ ಇಂದಿರಾಗಾಂಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 1880ರ ಪೂರ್ವದಲ್ಲಿ 3.37 ಲಕ್ಷ ಟನ್ ಅದಿರು ತೆಗೆದು ಪ್ರತಿಟನ್‌ಗೆ 18.5 ಗ್ರಾಂ ಚಿನ್ನ ಉತ್ಪಾದಿಸಲಾಗುತ್ತಿತ್ತು.
1881ರಿಂದ 1900ರ ಅವಧಿಯಲ್ಲಿ ಚಿನ್ನದ ಗಣಿಯಲ್ಲಿ ಉತ್ಪಾದನೆ ನಿರ್ಣಾಯಕ ಹಂತ ಮುಟ್ಟಿತ್ತಾದರೂ ಆಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಕೆಲಸ ಮಾಡುವುದು ಕಷ್ಟವಾಯಿತು, ಅನೇಕರು ಜೀವ ಕಳೆದುಕೊಂಡಿದ್ದರು. ನೂರಾರು ಕಾರ್ಮಿಕರನ್ನು ಕೆಲಸದಿಂದ ಮುಕ್ತಗೊಳಿಸಲಾಯಿತು, ಕೆಲವರನ್ನು ಬೇರೆಡೆ ವರ್ಗಾಯಿಸಿದ್ದರಿಂದ ತಜ್ಞರು ಸೇರಿ 22560 ಜನರಿಗೆ ಕೆಲಸ ನೀಡಿದ್ದ ಗಣಿಯಲ್ಲಿ 1971-72ರ ವೇಳೆಗೆ 13166 ಕಾರ್ಮಿಕರು ಉಳಿಯುವಂತಾಯಿತು. 1971ರಿಂದ 1980ರ ಅವಧಿಯಲ್ಲಿ ಉತ್ಪಾದನೆ ಕುಂಠಿತಗೊಂಡಿತು, 36.2 ಲಕ್ಷ ಟನ್ ಚಿನ್ನದ ಆದಿರು ಗಣಿಯಿಂದ ಹೊರ ತೆಗೆದು ಪ್ರತಿ ಟನ್‌ಗೆ 5.35 ಗ್ರಾಂ ಚಿನ್ನ ಲಭ್ಯವಾಗುತ್ತಿದ್ದರಿಂದ ಒಟ್ಟು 16,400 ಕಿಲೋ ಗ್ರಾಪಂ ಚಿನ್ನ ಉತ್ಪತ್ತಿ ಮಾಡಲಾಗಿತ್ತು.
ಬಿಜಿಎಂಎಲ್ ಎಂದು ನಾಮಕರಣ: 1972, ಏ.1ರಂದು ಗಣಿಯನ್ನು ಸಾರ್ವಜನಿಕ ಉದ್ಯಮ ವಲಯ ಎಂದು ಪರಿಗಣಿಸಿ ಬಿಜಿಎಂಎಲ್ ಎಂದು ನಾಮಕರಣ ಮಾಡಲಾಯಿತು. 18 ವರ್ಷಗಳ ಕಾಲ ಗಣಿಗಾರಿಕೆ ನಡೆಸಿದ್ದ ಬಿಜಿಎಂಎಲ್ ಉತ್ಪಾದನೆಯ ಕುಂಠಿತ, ದುರಾಡಳಿತ, ಅವ್ಯವಹಾರದಿಂದ ನಷ್ಟ ಅನುಭವಿಸುವಂತಾಯಿತು. ಉತ್ಪಾದನೆ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಬಂದಿದ್ದರಿಂದ ಗಣಿಯನ್ನು ರೋಗಗ್ರಸ್ಥ ಕೈಗಾರಿಕೆ ಎಂದು ಘೋಷಿಸಿ ಕೈಗಾರಿಕಾ ಹಣಕಾಸು ಮರು ನಿರ್ಮಾಣ ಮಂಡಳಿ ಸಲಹೆ ಮೇರೆಗೆ 2000ನೇ ಏಪ್ರಿಲ್‌ನಿಂದ ಉತ್ಪಾದನೆ ಕಾರ್ಯ ಸ್ಥಗಿತಗೊಳಿಸಲಾಯಿತು.
ನಂತರದ ಬೆಳವಣಿಗೆ: ಗಣಿ ಪುನಶ್ಚೇತನಕ್ಕೆ ಅಪಾರ ಬಂಡವಾಳ ಬೇಕು. ಕೇಂದ್ರ ಅಥವಾ ರಾಜ್ಯ ಸರ್ಕಾರಕ್ಕೆ ಬಂಡವಾಳ ಒದಗಿಸಲಾಗುತ್ತಿಲ್ಲ. ಖಾಸಗಿ ಉದ್ಯಮಿಗಳ ಸಹಯೋಗದಲ್ಲಿ ಗಣಿ ಮರು ಸ್ಥಾಪನೆಗೆ ಕೆಲವರು ಸಹಮತ ಸೂಚಿಸಿದರೆ, ಮತ್ತೆ ಕೆಲವರಿಂದ ಸರ್ಕಾರದಿಂದಲೇ ಗಣಿ ನಡೆಯಬೇಕು, ಇಲ್ಲ ಕಾರ್ಮಿಕರಿಗೆ ವಹಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಗಣಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಶೇಖರಣೆಯಾಗುವಂತಾಗಿದೆ, ಯಂತ್ರೋಪಕರಣ ತುಕ್ಕು ಹಿಡಿದಿವೆ. ಕಳ್ಳತನ ಹೆಚ್ಚಾಗಿದೆ.
ಗಣಿ ಬಂದ್ ನಂತರ ಸಾವಿರಾರು ಕಾರ್ಮಿಕರು ಜೀವನೋಪಾಯಕ್ಕಾಗಿ ವಲಸೆ ಹೋಗಿದ್ದಾರೆ, ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ, ಗಣಿ ಬಂಗಲೆ ಪರರ ಪಾಲಾಗಿದೆ, ಕಾರ್ಮಿಕರಿಗೆ ಸರಿಯಾಗಿ ಪರಿಹಾರ ಸಿಗದೆ ತೊಂದರೆ ಅನುಭವಿಸಿದ್ದಾರೆ, ವಾಸದ ಮನೆಗಳಿಗೆ ಹಕ್ಕುಪತ್ರವಿಲ್ಲದೆ ಆತಂತ್ರ ಸ್ಥಿತಿಯಲ್ಲಿದ್ದಾರೆ.
ಕೆಜಿಎಫ್‌ನಲ್ಲಿ ಚಿನ್ನದ ಗಣಿ ಪುನರಾರಂಭಿಸಬೇಕೆಂದು ಕಳೆದ 20 ವರ್ಷಗಳಲ್ಲಿ ಅನೇಕ ಹೋರಾಟ ನಡೆದಿದೆ, ರಾಜಕಾರಣಿಗಳು ಚುನಾವಣೆ ವೇಳೆ ನೀಡಿದ ಭರವಸೆ ಹುಸಿಯಾಗಿದೆ, ಕನಿಷ್ಠ ಪಕ್ಷ ಗಣಿಗೆ ಸೇರಿದ ಆಸ್ಪತ್ರೆಗೆ ಜಡಿದಿರುವ ಬೀಗ ತೆರವು ಮಾಡಿಸಿ ಬಡ ಕಾರ್ಮಿಕರಿಗೆ ಆರೋಗ್ಯ ಸೇವೆ ಕಲ್ಪಿಸುವುದಕ್ಕೆ ಆಗಿಲ್ಲ.
ಕೋಲಾರ ಕ್ಷೇತ್ರವನ್ನು ಸತತ 28 ವರ್ಷ ಆಳಿದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಗಣಿಯನ್ನು ಮರು ಆರಂಭಿಸಲು ನಡೆಸಿದ ಪ್ರಯತ್ನ ವಿಫಲವಾದ ಬಳಿಕ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಕೇಂದ್ರ ಗಣಿ ಸಚಿವ ಪ್ರಲ್ಹಾದ ಜೋಶಿ ಮೇಲೆ ಒತ್ತಡ ತಂದು ಚಿನ್ನ ಸಿಗುವ ಬಗ್ಗೆ ಖಾತ್ರಿ ಮಾಡಿಕೊಳ್ಳಲು ಸರ್ವೇ ಕಾರ್ಯಕ್ಕೆ ಚಾಲನೆ ಸಿಗುವಂತೆ ಮಾಡಿದ್ದಾರೆ.
ಇನ್ನೂ ಆರು ತಿಂಗಳು: ಹೈದರಾಬಾದ್‌ನ ಎಂಇಸಿಎಲ್ ಸಂಸ್ಥೆಯಿಂದ ಚಿನ್ನದ ನಿಕ್ಷೇಪ ಪತ್ತೆ ಕಾರ್ಯ ನಡೆಯುತ್ತಿದೆ. ವರದಿ ಬರಲು ಇನ್ನೂ 6 ತಿಂಗಳು ಕಾಯಬೇಕು. ಒಂದು ವೇಳೆ ಚಿನ್ನ ದೊರೆತರೂ ಉತ್ಪಾದನೆ ವೆಚ್ಚ ಹೆಚ್ಚುವುದರಿಂದ ಬಂಡವಾಳ ಹೂಡಲು ಕೇಂದ್ರ ಸರ್ಕಾರ ಖಾಸಗಿಯವರ ಸಹಕಾರ ಪಡೆಯುವುದು ಅನಿವಾರ್ಯ.
ಸರ್ಕಾರಕ್ಕೂ ಆದಾಯ: ಗಣಿಗೆ ಸೇರಿದ 12 ಸಾವಿರ ಎಕರೆ ಪ್ರದೇಶದಲ್ಲಿ 1300 ಎಕರೆ ಭೂಮಿ ಬಳಕೆಯಾಗದೆ ಖಾಲಿ ಉಳಿದಿದ್ದು ರಾಜ್ಯ ಸರ್ಕಾರ ಈ ಭೂಮಿ ವಶಕ್ಕೆ ಪಡೆದು ಕೇಂದ್ರದ ಸಹಯೋಗದಲ್ಲಿ ಕೈಗಾರಿಕಾಭಿವೃದ್ಧಿಗೆ ಯೋಜನೆ ರೂಪಿಸಿದಲ್ಲಿ ಸಾವಿರಾರು ಜನರಿಗೆ ಉದ್ಯೋಗ ಸಿಗುವುದಲ್ಲದೆ, ಸರ್ಕಾರಕ್ಕೂ ಆದಾಯ ಸಿಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಕೆಜಿಎಫ್ ಬಗ್ಗೆ ವಿಶೇಷ ಆಸಕ್ತಿ ಇರುವುದು ನಿಜವಾದಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆ ಮುಖಂಡರು ಪಕ್ಷಾತೀತವಾಗಿ ನಿಯೋಗ ತೆರಳಿ ಕೆಜಿಎಫ್ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ಗಾಗಿ ಮನವಿ ಮಾಡಿದರೆ ಚಿನ್ನದ ಗಣಿ ಗತವೈಭವ ಮರುಕಳಿಸುವುದರಲ್ಲಿ ಅನುಮಾನವಿಲ್ಲ. ಎಸ್.ಮುನಿಸ್ವಾಮಿ, ಸಂಸದ