ಮುಂಡರಗಿ: ರಾಜ್ಯದಲ್ಲಿ 3300 ತಾಂಡಾಗಳಿದ್ದು, 2 ಸಾವಿರ ತಾಂಡಾಗಳು ಕಂದಾಯ ಗ್ರಾಮಗಳು ಆಗಬೇಕು ಎಂದು ಶಾಸಕ, ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಪಿ. ರಾಜೀವ್ ಹೇಳಿದರು.
ಪಟ್ಟಣದ ಪುರಸಭೆ ಮೈದಾನದಲ್ಲಿ ಶ್ರೀ ಸೇವಾಲಾಲ್ ಸಮಿತಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಎಲ್ಲ ತಾಂಡಾಗಳನ್ನು ಮರು ಪರಿಶೀಲಿಸಿ ಯಾವ ತಾಂಡಾ ಕಂದಾಯ ಗ್ರಾಮಕ್ಕೆ ಒಳಪಟ್ಟಿಲ್ಲವೋ ಅಂತಹ ತಾಂಡಾಗಳನ್ನು ಕಂದಾಯ ಗ್ರಾಮಕ್ಕೆ ಒಳಪಡಿಸಲಾಗುವುದು ಎಂದರು.
ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಸೇವಾಲಾಲ್ರಂತ ಸಂತರನ್ನು ಇಟ್ಟುಕೊಂಡು ಬೇರೊಂದು ಧರ್ಮಕ್ಕೆ ಮತಾಂತರ ಆಗೋದು ದೇಶ, ಧರ್ಮಕ್ಕೆ ಮಾಡುವ ದ್ರೋಹ. ಹಿರಿಯರು ಮತಾಂತರ ತಡೆಗಟ್ಟಬೇಕು ಎಂದು ಹೇಳಿದರು.
ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಮಾತನಾಡಿ, ಸದಾಶಿವ ಆಯೋಗ ವರದಿಯ ರಚನೆಯ ಉದ್ದೇಶ, ವ್ಯಾಪ್ತಿ ಮೀರಿ ವರದಿಯನ್ನು ನೀಡಿದ್ದು ಸಂವಿಧಾನಬಾಹಿರ. ಅದನ್ನು ತಿರಸ್ಕರಿಸುವಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಮನವಿ ಮಾಡಿದ್ದೆವು. ಪರಿಶಿಷ್ಟ ಜಾತಿಯ ಎಲ್ಲ ಉಪಜಾತಿಗಳಿಗೆ ಎಲ್ಲ ಸೌಲಭ್ಯ ನೀಡಬೇಕು ಎಂದರು.
ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ, ಶಾಸಕ ರಾಮಣ್ಣ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಭೀಮಸಿಂಗ್ ರಾಠೋಡ, ಪಿ.ಟಿ. ಭರತನಾಯ್ಕ, ಲಿಂಗರಾಜಗೌಡ ಪಾಟೀಲ, ರಾಕ್ರಪ್ಪ ನಾಯ್ಕ, ಸಿ.ಪಿ. ಬೊಮ್ಮನಪಾಡ, ಶಕುಂತಲಾ ಚವ್ಹಾಣ, ಶೋಭಾ ಮೇಟಿ, ಈರಣ್ಣ ನಾಡಗೌಡ್ರ, ಡಾ. ಲಕ್ಷ್ಮ ನಾಯಕ, ರಾಮಚಂದ್ರ ಕಲಾಲ್, ಸುರೇಶ ಮೇಲಗಿಮನಿ, ಇತರರಿದ್ದರು.
ಸುಭಾಸ ಗುಡಿಮನಿ, ಎಚ್.ಜೆ. ಪವಾರ, ಎಚ್.ಎಂ. ರಾಠೋಡ ನಿರ್ವಹಿಸಿದರು.