ಚಾಮರಾಜನಗರ: ನ್ಯಾಯಕ್ಕಾಗಿ ಇನ್ನಿಲ್ಲದ ಹೋರಾಟ ನಡೆಸುತ್ತಿರುವ ಆಕ್ಸಿಜನ್ ದುರಂತದ ಸಂತ್ರಸ್ತರು ಪ್ರಕರಣದ ಮರು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿಗಳಿಗೆ ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ.
ಬೆಂಗಳೂರಿನ ಹಳೆಯ ಕುಮಾರ ಕೃಪಾಕ್ಕೆ ಚಾಮರಾಜನಗರ ನಗರಸಭೆ ಸದಸ್ಯರಾದ ಮಹೇಶ್ ಗಾಳೀಪುರ, ಕಲೀಲ್‌ವುಲ್ಲಾ ನೇತೃತ್ವದಲ್ಲಿ ಸಂತ್ರಸ್ತರಾದ ಮಂಜುನಾಥ್, ರಾಣಿ, ನಾಗರತ್ನ, ಸುಶೀಲಾ, ನಂದಿನಿ, ಎಂ. ಪುಷ್ಪಾ, ಸವಿತಾ ಲಕ್ಕೂರು, ಸಿದ್ದರಾಜಮ್ಮ ಮಂಗಳವಾರ ಭೇಟಿ ನೀಡಿದ ನ್ಯಾ.ಮೈಕಲ್ ಡಿ ಕುನ್ಹಾ ಅವರನ್ನು ಭೇಟಿ ಮಾಡಿ ಅಫಿಡವಿಟ್ ಸಲ್ಲಿಸಿದ್ದಾರೆ. ಕೋವಿಡ್‌ನಿಂದಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ನಮ್ಮ ಕುಟುಂಬದವರು ಸಾಯಲು ಆಕ್ಸಿಜನ್ ಸಿಗದೆ ಇರುವುದೇ ಕಾರಣ. ಸರಿಯಾದ ಸಮಯಕ್ಕೆ ಪ್ರಾಣವಾಯು ಪೂರೈಕೆ ಮಾಡದೆ ನಿರ್ಲಕ್ಷ್ಯವಹಿಸಿರುವ ಮತ್ತು ಈ ದುರ್ಘಟನೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೋರಿದ್ದಾರೆ. ಮೃತರನ್ನೇ ಅವಲಂಬಿಸಿರುವ ಕುಟುಂಬಸ್ಥರಿಗೆ ಉದ್ಯೋಗ, ಸೂಕ್ತ ಪರಿಹಾರ ನೀಡಬೇಕೆಂದು ವಿನಂತಿಸಿದ್ದಾರೆ. ಸಂತ್ರಸ್ತರಲ್ಲಿ ಇಬ್ಬರನ್ನು ಕರೆದು ಮಾತನಾಡಿಸಿರುವ ನ್ಯಾ.ಕುನ್ಹಾ ವಿಚಾರಣೆಗೆ ಅಗತ್ಯವಿದ್ದಲ್ಲಿ ಬರಲು ಕರೆಸುತ್ತೇವೆ. ತನಿಖೆ ನಡೆಸಿ ಸರ್ಕಾರಕ್ಕೆ ತಿಳಿಸುತ್ತೇವೆ ಎಂದು ಹೇಳಿರುವುದಾಗಿ ಸಂತ್ರಸ್ತ ಮಂಜುನಾಥ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಇನ್ನು ಕೆಲವು ಸಂತ್ರಸ್ತರು ನೇರವಾಗಿ ಅಂಚೆ ಮೂಲಕವೂ ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ.
ಮರು ತನಿಖೆಗೆ ಮೇಲೆ ಆಶಾಭಾವ:
2021ರ ಮೇ 2ರ ಮಧ್ಯರಾತ್ರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಕೋವಿಡ್ ಸೋಂಕಿತರು ಮೃತಪಟ್ಟರು. ಪ್ರಕರಣದ ಮರು ತನಿಖೆಯ ಮೇಲೆ ಸಂತ್ರಸ್ತರ ಕುಟುಂಬಗಳು ಆಶಾಭಾವವನ್ನು ಇಟ್ಟುಕೊಂಡಿವೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಆಕ್ಸಿಜನ್ ದುರಂತ ಸಂಭವಿಸಿತು. ಆಗ ಸರ್ಕಾರ ಕೆಎಸ್‌ಆರ್‌ಟಿಸಿ ಎಂಡಿ ಆಗಿದ್ದ ಶಿವಯೋಗಿ ಕಳಸದ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಿತು. ವಿಪಕ್ಷಗಳ ಆಕ್ಷೇಪದ ಬಳಿಕ ನ್ಯಾಯಾಂಗ ತನಿಖೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಾಮೂರ್ತಿ ಬಿ.ಎ.ಪಾಟೀಲ್ ಅವರಿಗೆ ವಹಿಸಿತು. ಈ ಹಿನ್ನೆಲೆಯಲ್ಲಿ ಶಿವಯೋಗಿ ಕಳಸದ ವಿಚಾರಣೆಯಿಂದ ಕೈ ಬಿಟ್ಟರು. ಹೈಕೋರ್ಟ್ ನ್ಯಾಯಮೂರ್ತಿ ಎ.ಎಸ್.ಓಕ್ ಆಕ್ಸಿಜನ್ ಸಾವಿನ ಪ್ರಕರಣವನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿವೃತ್ತ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲ ಗೌಡ ನೇತೃತ್ವದ ಸಮಿತಿ ಸತ್ಯಶೋಧನೆ ನಡೆಸಲು ನಿರ್ದೇಶನ ನೀಡಿತು. ಸಮಿತಿ ವಿಚಾರಣೆ ನಡೆಸಿ ಅಂದಿನ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯವನ್ನು ಎತ್ತಿ ಹಿಡಿದಿತ್ತು. ಇದರ ಮಧ್ಯೆ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದರು. ಈ ವರದಿಯನ್ನು ಕಾಂಗ್ರೆಸ್ ಸರ್ಕಾರ ತಿರಸ್ಕಾರ ಮಾಡಿತು. ನ್ಯಾ.ಕುನ್ಹಾ ಅವರಿಂದ ಮರು ತನಿಖೆ ಮಾಡಿಸುತ್ತಿದೆ. ಈ ಬಗ್ಗೆ ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ನಾನು ಮತ್ತು ಸಿದ್ದರಾಮಯ್ಯ ಅವರು ಆಕ್ಸಿಜನ್ ದುರಂತ ಪ್ರಕರಣವನ್ನು ವಿಚಾರಣೆ ಮಾಡಿದ್ದೇವೆ. ಅಧಿಕಾರಿಗಳು ನಮ್ಮೆದುರೇ ಒಪ್ಪಿಕೊಂಡಿದ್ದಾರೆ. ಯಾವ ಯಾವ ಅಧಿಕಾರಿಗಳ ತಪ್ಪಿದೆ ಎಂದು ಗೊತ್ತಾಗಿದೆ. 31 ಮೃತರ ಕುಟುಂಬಗಳನ್ನು ಭೇಟಿ ಮಾಡಿ ಬಂದಿದ್ದೇವೆ. ಇದರ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಿದೆ. ನ್ಯಾ.ಕುನ್ಹಾ ಇದನ್ನು ನೋಡುತ್ತಿದ್ದಾರೆ ಎಂದು ತಿಳಿಸಿದ್ದರು.
ಇನ್ನೆಷ್ಟು ದಿನ ಕಾಯಬೇಕೋ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ಕೊಟ್ಟಿತ್ತು. ಇದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೊದಲೇ ೋಷಣೆ ಮಾಡಿದ್ದ ಆಶ್ವಾಸನೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿದ್ದಾಗ ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದರು. ಈ ಸಂದರ್ಭದಲ್ಲಿ ಸರ್ಕಾರಿ ಉದ್ಯೋಗದ ಭರವಸೆ ದೊರೆತಿತ್ತು. ಅಂದು ಸಂತ್ರಸ್ತರ ಕಷ್ಟ ಕೇಳಿ ಗದ್ಗದಿತರಾಗಿ ಕಣ್ಣೀರಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧಿಕಾರ ಹಿಡಿದ ಬಳಿಕ ಸಂತ್ರಸ್ತರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರವನ್ನು ನೀಡಿದ್ದರು. ಆದರೆ ಇಂದಿಗೂ ಉದ್ಯೋಗದ ಭರವಸೆ ಈಡೇರಲೇ ಇಲ್ಲ. ಮನೆಗೆ ಆಧಾರವಾಗಿದ್ದವರನ್ನು ಕಳೆದುಕೊಂಡು ಬದುಕಿನ ಜಂಜಾಟಗಳಲ್ಲಿ ಸಿಲುಕಿರುವ ಸಂತ್ರಸ್ತರು ನ್ಯಾಯಕ್ಕಾಗಿ ನಡೆಸುತ್ತಿರುವ ಅಲೆದಾಟ ನಿಲ್ಲುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮಲೆ ಮಹದೇಶ್ವರ ಬೆಟ್ಟದ ಸಚಿವ ಸಂಪುಟ ಸಭೆ ಬೆಳಕಂತೆ ಬಂದಿತು. ಆದರೆ ಕ್ಯಾಬಿನೆಟ್‌ನಲ್ಲೂ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ಕೊಡುವ ವಿಚಾರ ಚರ್ಚೆಯಾಗಲೇ ಇಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಬಿಟ್ಟರು. ಇದರಿಂದ ಬೇಸರಗೊಂಡ ಸಂತ್ರಸ್ತರು ಕಾಂಗ್ರೆಸ್ ಕೊಟ್ಟಿದ್ದ 1 ಲಕ್ಷ ರೂ. ಪರಿಹಾರವನ್ನು ವಾಪಸ್ ಕೊಡಲು ನಿರ್ಧರಿಸಿದರು. ಆದರೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಮತ್ತು ಸಂಸದ ಸುನೀಲ್‌ಬೋಸ್ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮುಂದಿನ ಕ್ಯಾಬಿನೆಟ್‌ನಲ್ಲಿ ಸರ್ಕಾರಿ ಉದ್ಯೋಗದ ಭರವಸೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿ ಸಮಾಧಾನ ಪಡಿಸಿದರು. ಈ ಹಿನ್ನೆಲೆಯಲ್ಲಿ ಸಂತ್ರಸ್ತರು ಮುಂದಿನ ಎಲ್ಲ ಕ್ಯಾಬಿನೆಟ್‌ಗಳನ್ನೂ ಭರವಸೆ ಈಡೇರುವ ನಿರೀಕ್ಷೆಯನ್ನು ಹೊತ್ತು ಕಾಯುವಂತಾಗಿದೆ.
ಆಕ್ಸಿಜನ್ ದುರಂತ ಪ್ರಕರಣದ ಮರು ತನಿಖೆ ನಡೆಸುತ್ತಿರುವ ನ್ಯಾ.ಕುನ್ಹಾ ಅವರಿಗೆ ಸಂತ್ರಸ್ತರು ಅಫಿಡವಿಟ್ ಸಲ್ಲಿಸಿದ್ದಾರೆ. ತನಿಖೆಯ ಮೇಲೆ ನಂಬಿಕೆ ಇಟ್ಟು ದೂರು ಸಲ್ಲಿಸಲಾಗಿದ್ದು, ಇದನ್ನು ಪರಿಗಣಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಕೋರುತ್ತೇನೆ. ರಾಜ್ಯ ಸರ್ಕಾರ ಸಂತ್ರಸ್ತರಿಗೆ ಆದಷ್ಟು ಬೇಗ ಸರ್ಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸುತ್ತೇನೆ. ಮಹೇಶ್ ಗಾಳೀಪುರ, ನಗರಸಭೆ ಸದಸ್ಯ, ಚಾಮರಾಜನಗರ ನಮ್ಮನ್ನು ಕರೆಸಿ ಸಭೆ ನಡೆಸಿದ್ದ ಸಂಸದ ಸುನೀಲ್‌ಬೋಸ್ ಅವರು ನಮಗೆ ಸರ್ಕಾರಿ ಉದ್ಯೋಗದ ಭರವಸೆಯನ್ನು ಬೇಗ ಈಡೇರಿಸುವುದಾಗಿ ತಿಳಿಸಿದ್ದಾರೆ. ಎಂಪಿ ಮಾತಿನ ಮೇಲೆ ವಿಶ್ವಾಸವಿಟ್ಟು ಮುಂದಿನ ಕ್ಯಾಬಿನೆಟ್‌ಗಳಲ್ಲಿ ವಿಷಯ ಚರ್ಚೆಯಾಗುವ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದೇವೆ. ಮಂಜುನಾಥ್, ಆಮ್ಲಜನಕ ದುರಂತ ಪ್ರಕರಣದ ಸಂತ್ರಸ್ತ, ಚಾಮರಾಜನಗರ