ಜಿಲ್ಲೆ

ಮರು ತನಿಖೆಗೆ ಆಕ್ಸಿಜನ್ ದುರಂತ ಪ್ರಕರಣ

ಚಾಮರಾಜನಗರ: ಕರೊನಾ ಸಂದರ್ಭದಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಮ್ಲಜನಕ ದುರಂತ ಪ್ರಕರಣ ಮತ್ತೆ ತನಿಖೆಗೆ ಒಳಪಡಲಿದೆ.

2021ರ ಮೇ 2ರ ಮಧ್ಯರಾತ್ರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಕೋವಿಡ್ ಸೋಂಕಿತರು ಮೃತಪಟ್ಟರು. ಸಾವುಗಳ ಸರಮಾಲೆ ದೇಶವನ್ನೇ ಬೆಚ್ಚಿ ಬೀಳಿಸಿತು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಈಗಲೂ ಜೀವಂತವಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಈ ಪ್ರಕರಣದ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದ್ದು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಏಕಸದಸ್ಯ ನ್ಯಾಯಾಂಗ ಆಯೋಗದ ವರದಿಯನ್ನು ತಿರಸ್ಕರಿಸಿ ನ್ಯಾ.ಕುನ್ಹಾ ಅವರಿಗೆ ಮರು ತನಿಖೆಯ ಜವಾಬ್ದಾರಿ ನೀಡಲಾಗಿದೆ ಎಂದಿದ್ದಾರೆ. ಹೀಗಾಗಿ ಮತ್ತೊಮ್ಮೆ ಆಕ್ಸಿಜನ್ ದುರಂತ ಪ್ರಕರಣ ತನಿಖೆಗೆ ಒಳಪಡಲಿದೆ.

3ನೇ ಬಾರಿ ತನಿಖೆ: ರಾಜ್ಯದಲ್ಲಿ ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಆಕ್ಸಿಜನ್ ದುರಂತ ಸಂಭವಿಸಿದಾಗ ಮೊದಲು ಕೆಎಸ್‌ಆರ್‌ಟಿಸಿ ಎಂಡಿ ಆಗಿದ್ದ ಶಿವಯೋಗಿ ಕಳಸದ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಿತ್ತು. ವಿಪಕ್ಷಗಳ ಆಕ್ಷೇಪದ ಬಳಿಕ ನ್ಯಾಯಾಂಗ ತನಿಖೆ ನಡೆಸಲು ತೀರ್ಮಾನಿಸಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಮೂರ್ತಿ ಬಿ.ಎ.ಪಾಟೀಲ್ ಅವರಿಗೆ ಜವಾಬ್ದಾರಿ ನೀಡಿತು. ಶಿವಯೋಗಿ ಕಳಸದ ವಿಚಾರಣೆಯಿಂದ ಹಿಂದೆ ಸರಿದರು. ಆಮ್ಲಜನಕ ದುರಂತ ಪ್ರಕರಣವನ್ನು ಸಾರ್ವಜನಿಕರ ಹಿತಾಸಕ್ತಿ ಮೇರೆಗೆ ಸ್ವಯಂಪ್ರೇರಿತವಾಗಿ ತನಿಖೆ ನಡೆಸಲು ಮುಂದಾಗಿದ್ದ ಲೋಕಾಯುಕ್ತ ಹೈಕೋರ್ಟ್ ಸತ್ಯಶೋಧಕ್ಕೆ ಮುಂದಾಗಿರುವುದಕ್ಕೆ ಹಿಂದಕ್ಕೆ ಹೆಜ್ಜೆ ಇಟ್ಟಿತು.

ಈ ಮಧ್ಯೆ ಹೈಕೋರ್ಟ್ ನ್ಯಾಯಮೂರ್ತಿ ಎ.ಎಸ್.ಓಕ್ ಆಕ್ಸಿಜನ್ ಸಾವಿನ ಪ್ರಕರಣವನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿವೃತ್ತ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲ ಗೌಡ ನೇತೃತ್ವದ ಸಮಿತಿ ಸತ್ಯಶೋಧನೆ ನಡೆಸಲು ನಿರ್ದೇಶನ ನೀಡಿತು. ಸಮಿತಿ ವಿಚಾರಣೆ ನಡೆಸಿ ಅಂದಿನ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯವನ್ನು ಎತ್ತಿ ಹಿಡಿದಿತ್ತು. ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಕೂಡ ವಿಚಾರಣೆ ನಡೆಸಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಇವರು ಸಲ್ಲಿಸಿರುವ ವರದಿಯನ್ನು ತಿರಸ್ಕಾರಿಸಿ, ನ್ಯಾ.ಕುನ್ಹಾ ಅವರಿಗೆ ಮರು ತನಿಖೆಗೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಡಿಸಿಎಂ ಹೇಳಿರೋದೇನು?

ನಾನು ಮತ್ತು ಸಿದ್ದರಾಮಯ್ಯ ಅವರು ಆಕ್ಸಿಜನ್ ದುರಂತ ಪ್ರಕರಣವನ್ನು ವಿಚಾರಣೆ ಮಾಡಿದ್ದೇವೆ. ಅಧಿಕಾರಿಗಳು ನಮ್ಮೆದುರೇ ಒಪ್ಪಿಕೊಂಡಿದ್ದಾರೆ. ಯಾವ ಯಾವ ಅಧಿಕಾರಿಗಳ ತಪ್ಪಿದೆ ಎಂದು ಗೊತ್ತಾಗಿದೆ. 31 ಮೃತರ ಕುಟುಂಬಗಳನ್ನು ಭೇಟಿ ಮಾಡಿ ಬಂದಿದ್ದೇವೆ. ಇದರ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಿದೆ. ನ್ಯಾ.ಕುನ್ಹಾ ಇದನ್ನು ನೋಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನ್ಯಾಯದ ನಿರೀಕ್ಷೆಯಲ್ಲಿ...

ಆಕ್ಸಿಜನ್ ದುರಂತದ ಸಂತ್ರಸ್ತರು ನ್ಯಾಯದ ನಿರೀಕ್ಷೆಯಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ. 2021ರ ಮೇ 2ರ ತಡರಾತ್ರಿ ನಡೆದ ಪ್ರಕರಣದಲ್ಲಿ ಈವರೆಗೂ ಸಹ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೃತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಕೊಟ್ಟಿದ್ದ ಭರವಸೆಯೂ ಈಡೇರಿಲ್ಲ. ಸಂತ್ರಸ್ತರಲ್ಲಿ ಕೆಲವರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ದಿನ ಕಳೆದಂತೆ ಈ ಪ್ರಕರಣ ಮಾಸುತ್ತಿದ್ದರೂ ನೊಂದವರ ಕಷ್ಟ ಏರುತ್ತಲೇ ಇದೆ. ಎಸ್‌ಡಿಪಿಐ ಪಕ್ಷ ಸಂತ್ರಸ್ತರ ಪರವಾಗಿ ಹೋರಾಟ ನಡೆಸುತ್ತಿದೆ. ಈ ನಡುವೆ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಸಹ ಸಂತ್ರಸ್ತರ ಪರ ಧ್ವನಿ ಎತ್ತಿದ್ದರು. ಮೃತರ ಕುಟುಂಬಕ್ಕೆ ನ್ಯಾಯ , ಸೂಕ್ತ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ದೊರಬೇಕಿದೆ.

ಆಕ್ಸಿಜನ್ ಪ್ರಕರಣದ ಮರು ತನಿಖೆ ಮಾಡಿಸುವುದು ಒಳ್ಳೆಯದು. ವಿಚಾರಣೆ ವಾಸ್ತವಾಂಶದಿಂದ ಕೂಡಿರಬೇಕು. ಪ್ರತಿಯೊಬ್ಬ ಸಂತ್ರಸ್ತರನ್ನೂ ಭೇಟಿ ಮಾಡಿ ಮಾಹಿತಿ ಪಡೆದುಕೊಂಡು ನ್ಯಾಯ ದೊರಕಿಸಿಕೊಡಬೇಕು.

ರಾಜಶೇಖರ್, ಮೃತ ದೊಡ್ಡಯ್ಯ ಭಾವಮೈದುನ