ಮೈಸೂರು: ಮೈಸೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕರಾಟೆ, ಕಿಕ್ ಬಾಕ್ಸಿಂಗ್, ಕುಸ್ತಿ ಪಂದ್ಯಾವಳಿಯಲ್ಲಿ ಮಲ್ಲಮ್ಮ ಮರಿಮಲ್ಲಪ್ಪ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿಯರು ವಿವಿಧ ವಿಭಾಗದಲ್ಲಿ ಜಯ ಗಳಿಸಿದ್ದಾರೆ.
ಮಹಿಳೆಯರ ಕರಾಟೆ ವಿಭಾಗದ 68 ಕೆ.ಜಿ. ವಿಭಾಗದಲ್ಲಿ ಅಂತಿಮ ಬಿಕಾಂ ವಿದ್ಯಾರ್ಥಿನಿ ಎಚ್.ಸುಧಾ, 50 ಕೆ.ಜಿ. ವಿಭಾಗದಲ್ಲಿ ದ್ವಿತೀಯ ಬಿಎ ವಿದ್ಯಾರ್ಥಿನಿ ಆರ್.ದಾಕ್ಷಾಯಿಣಿ, 65 ಕೆ.ಜಿ. ತೂಕದ ವಿಭಾಗದಲ್ಲಿ ಪ್ರಥಮ ಬಿಕಾಂ ವಿದ್ಯಾರ್ಥಿನಿ ಎನ್.ಲಾವಣ್ಯ ಚಿನ್ನದ ಪದಕ ಪಡೆದಿದ್ದಾರೆ.
ಎಚ್.ಸುಧಾ, ಆರ್.ದಾಕ್ಷಾಯಿಣಿ ಅವರು ಜ.17ರಿಂದ 22ರ ವರೆಗೆ ಛತ್ತೀಸ್‌ಗಡದ ಬಿಲಾಸ್‌ಪುರದ ಅಟಲ್‌ಬಿಹಾರಿ ವಾಜಪೇಯಿ ವಿವಿ ಆಯೋಜಿಸಿರುವ ಅಖಿಲ ಭಾರತ ಅಂತರ ವಿವಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಪುಣೆಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ಅಂತರ ವಿವಿ ಕುಸ್ತಿ ಪಂದ್ಯಾವಳಿಯಲ್ಲಿಯೂ ಈ ಇಬ್ಬರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಬೆಳ್ಳಿ ಪದಕ: ಮೈಸೂರು ವಿವಿ ಅಂತರ ಕಾಲೇಜು ಕರಾಟೆ ಮತ್ತು ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ದ್ವಿತೀಯ ಬಿಬಿಎ ವಿದ್ಯಾರ್ಥಿ ಡಿ.ಜೆ.ಸೂರ್ಯ ಪುರುಷರ 55 ಕೆ.ಜಿ. ವಿಭಾಗದಲ್ಲಿ ಚಿನ್ನ, ಕಿಕ್ ಬಾಕ್ಸಿಂಗ್‌ನಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾನೆ. ಛತ್ತೀಸ್‌ಗಡದ ಬಿಲಾಸ್‌ಪುರ್‌ನಲ್ಲಿ ಆಯೋಜಿಸಿರುವ ಸ್ಪರ್ಧೆಯಲ್ಲಿಯೂ ಭಾಗವಹಿಸಲಿದ್ದಾನೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿಜೇತ ವಿದ್ಯಾರ್ಥಿಗಳನ್ನು ಕಾಲೇಜಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಎನ್.ಪಂಚಾಕ್ಷರಸ್ವಾಮಿ, ಪ್ರಾಂಶುಪಾಲರಾದ ನೇತ್ರಾ ಉತ್ತಯ್ಯ, ದೈಹಿಕ ಶಿಕ್ಷಣ ನಿರ್ದೇಶಕ ಎ.ಎಸ್.ಪ್ರಭುಸ್ವಾಮಿ ಇತರರು ಅಭಿನಂದಿಸಿದರು.