ಕೊಳ್ಳೇಗಾಲ: ನಗರದ ಶ್ರೀ ಮೀನಾಕ್ಷಿ ಸಮೇತ ಶ್ರೀ ಮರಳೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ಜರುಗಿತು.
ಮುಂಜಾನೆಯಿಂದಲೇ ಶ್ರೀ ಮರಳೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ, ಪ್ರಾತಃಕಾಲ ಪೂಜೆ, ವೃಷಭ ಯಾಗ, ಬಲಿಹರಣ, ಗಜಪೂಜೆ, ಬ್ರಹ್ಮಪೂಜೆ ನಡೆಯಿತು. ಬಳಿಕ ದೇವಾಲಯದ ಮುಂಭಾಗದಲ್ಲಿ ಶ್ರೀ ಮೀನಾಕ್ಷಿ ಸಮೇತ ಶ್ರೀ ಮರಳೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಅಲಂಕೃತಗೊಂಡಿದ್ದ ರಥದ ಮೇಲೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ರಥದ ಚಕ್ರಕ್ಕೆ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ನಿರಂಜನ್ ಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ನೂರಾರು ಭಕ್ತರ ಜಯಘೋಷದ ನಡುವೆ ರಥ ಎಳೆದರು. ಕಾವೇರಿ ರಸ್ತೆ, ನಾರಾಯಣ ಸ್ವಾಮಿ ಗುಡಿ ರಸ್ತೆ ರಾಜ ಬೀದಿಗಳಲ್ಲಿ ರಥ ಸಾಗಿತು. ಮನೆ ಮುಂದೆ ರಥಕ್ಕೆ ಜನರು ಪೂಜೆ ಸಲ್ಲಿಸಿದರು. ಸಂಜೆ ದೇಗುಲದಲ್ಲಿ ಅಭಿಷೇಕ ಪೂಜೆ ಹಾಗೂ ವಿವಿಧ ಉತ್ಸವಗಳು ನಡೆದವು. ಪ್ರಧಾನ ಅರ್ಚಕರಾದ ಡಾ.ನಾಗೇಂದ್ರ ಭಟ್ಟರು, ಶಿವರಾಮು ಭಟ್ಟರು ಪೂಜಾಕೈಂಕರ್ಯ ನೆರವೇರಿಸಿದರು.