ಜಿಲ್ಲೆ

ಮರದ ಪೀಠೋಪಕರಣ ಮನೆ ಅಂದಕ್ಕೆ ಹೂರಣ: ಖರೀದಿ- ನಿರ್ವಹಣೆಯಲ್ಲಿ ಇರಲಿ ಎಚ್ಚರ

ಬೆಂಗಳೂರು: ಮನೆಯ ಅಂದ ಹೆಚ್ಚಿಸುವಲ್ಲಿ ಪೀಠೋಪಕರಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲೂ ಮರದಿಂದ ಮಾಡಿದ ಪೀಠೋಪಕರಣಗಳಿಗೆ ಶತಮಾನಗಳ ಇತಿಹಾಸವಿದೆ. ರಾಜ- ಮಹಾರಾಜರ ಕಾಲದಿಂದಲೂ ಇದಕ್ಕೆ ಬೇಡಿಕೆ ಇದೆ. ಹೀಗಾಗಿ ಮನೆಗೆ ಪೀಠೋಪಕರಣ ತರುವ ಮುನ್ನ ಅವುಗಳ ಗುಣಮಟ್ಟದ ಬಗ್ಗೆ ಎಚ್ಚರವಿರಲಿ.

ಮೊದಲಿಗೆ, ಮನೆಯ ಪೀಠೋಪಕರಣಗಳನ್ನು ಯಾವ ಜಾಗದಲ್ಲಿ ಇಡಬೇಕು. ಎಲ್ಲಿ ಇಟ್ಟರೆ ಸೂಕ್ತ ಎಂಬುದನ್ನು ಮೊದಲೇ ನಿಶ್ಚಯಿಸಿಕೊಂಡು ಆ ನಿರ್ದಿಷ್ಟ ಸ್ಥಳಕ್ಕೆ ಹೊಂದಿಕೊಳ್ಳುವಂತೆ ಆಯ್ಕೆ ಮಾಡಿ ತರಬೇಕು. ಮನೆ ಬಾಗಿಲು, ಕಿಟಕಿಗಳಿಗೆ ಹೇಗೆ ಮರಗಳನ್ನು ಆಯ್ಕೆ ಮಾಡುತ್ತೇವೋ ಅದೇ ರೀತಿ ಪೀಠೋಪಕರಣಗಳ ಬಗ್ಗೆಯೂ ಉತ್ತಮ ಆಯ್ಕೆ ಹೊಂದಿರಬೇಕು. ಶ್ರೀಗಂಧ, ಸಾಗವಾನಿ, ಬೇವಿನ ಮರ, ಅಶೋಕ ವೃಕ್ಷ ಸೇರಿ ಶುಭ ಶಕುನವಿರುವ ಮರಗಳಿಂದ ಮಾಡಿದ ಪೀಠೋಪಕರಣಗಳನ್ನು ಖರೀದಿಸುವುದು ಉತ್ತಮ. ಹಳೆಯ ಪೀಠೋಪಕರಣಗಳನ್ನು ಎಂದೂ ಖರೀದಿಸಬಾರದು. ಹಾಗೆಯೇ ಹಳೆಯ ಮರದಿಂದ ಪೀಠೋಪಕರಣಗಳನ್ನು ಮಾಡಿಸಲೂಬಾರದು.

ಪೀಠೋಪಕರಣಗಳ ಖರೀದಿಗೂ ಶುಭ ದಿನಗಳನ್ನು ನೋಡಬೇಕು. ಶನಿವಾರ, ಮಂಗಳವಾರ ಹಾಗೂ ಅಮಾವಾಸ್ಯೆ ದಿನದಂದು ಮನೆಗೆ ತರಬಾರದು. ಇದರಿಂದ ಮನೆಯಲ್ಲಿ ಸುಖ-ಶಾಂತಿ ನಷ್ಟವಾಗುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು.

ಮನೆ ಅಂದ ಹೆಚ್ಚಲೆಂದು ಮರದ ಪೀಠೋಪಕರಣಗಳನ್ನು ತಂದರಷ್ಟೇ ಸಾಲದು ಅವುಗಳ ಸಂರಕ್ಷಣೆಯನ್ನೂ ಸರಿಯಾಗಿ ಮಾಡಬೇಕು. ಇಲ್ಲವಾದಲ್ಲಿ ಬೇಗನೆ ಹಾಳಾಗುತ್ತವೆ. ಮರದ ಪೀಠೋಪಕಣಗಳು ಮನೆಯ ಅಂದ ಹೆಚ್ಚಿಸುವುದರೊಂದಿಗೆ ದೀರ್ಘಕಾಲ ಬಾಳಿಕೆ ಬರುವಂತಿರಬೇಕು. ಹಾಗಾಗಿ ಅವುಗಳ ನಿರ್ವಹಣೆ ಮಾಡುವುದು ಮನೆಯವರೆಲ್ಲರ ಹೊಣೆ ಆಗಿರುತ್ತದೆ.

ಮರದ ಪೀಠೋಪಕರಣಗಳ ಮೇಲಿನ ಧೂಳನ್ನು ಪ್ರತಿದಿನ ಒರೆಸಬೇಕು. ಇದಕ್ಕಾಗಿ ಒಣಗಿದ ಹಾಗೂ ಹತ್ತಿಯ ಬಟ್ಟೆ ಬಳಸಬೇಕು. ಅಪರೂಪಕ್ಕೊಮ್ಮೆ ತೇವದ ಬಟ್ಟೆ ಬಳಸಬಹುದು. ಆದರೆ ಸದಾ ಒದ್ದೆ ಬಟ್ಟೆಯಿಂದ ಒರೆಸಿದರೆ ಅದರ ಬಣ್ಣ ಕುಂದುವುದರ ಜತೆಗೆ ಮರ ಬೇಗನೆ ಹಾಳಾಗುತ್ತದೆ. ಜತೆಗೆ ತೇವದ ಬಟ್ಟೆಯಿಂದ ಒರೆಸಿದರೆ ಕಲೆಗಳು ಉಳಿಯುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಒಣಗಿದ ಬಟ್ಟೆಯ ಬಳಕೆ ಸೂಕ್ತ.

ದೀರ್ಘ ಬಾಳಿಕೆ ಬರಲು ಏನು ಮಾಡಬೇಕು?

ಮರದ ಪೀಠೋಪಕರಣಗಳ ಮೇಲೆ ನೀರು ಬೀಳದಂತೆ ಎಚ್ಚರವಹಿಸಿ. ಹಾಗೇನಾದರೂ ನೀರು ಚೆಲ್ಲಿದ್ದರೆ ಅದನ್ನು ಒಣಬಟ್ಟೆಯಿಂದ ಅದ್ದಿ ತೆಗೆಯಿರಿ. ಉಜ್ಜಿ ಒರೆಸಬೇಡಿ. ಇದರಿಂದ ಸಣ್ಣ ಧೂಳಿನ ಕಣ ಗೆರೆಗಳಾಗಿ ಮೂಡಿ ಮರದ ಅಂದ ಹಾಳಾಗುವ ಸಾಧ್ಯತೆ ಇದೆ. ಊಟದ ಟೇಬಲ್ ಮೇಲೆ ಬಿಸಿ ಪಾತ್ರೆಗಳನ್ನು ಇಡಬೇಡಿ. ಇದರಿಂದ ಮರದ ಬಣ್ಣ ಹಾಳಾಗುವುದಲ್ಲದೆ, ಕಲೆ ಉಳಿಯುತ್ತದೆ. ಜತೆಗೆ ಮರದ ಮೇಲ್ಪದರ ಎಳೆಎಳೆಯಾಗಿ ಕಿತ್ತು ಹೋಗುತ್ತದೆ. ಹಾಗಾಗಿ ಬಿಸಿ ಪಾತ್ರೆಗಳನ್ನು ಇಡಲು ಟೇಬಲ್ ಸ್ಯಾಂಡ್ ಅಥವಾ ಟೇಬಲ್ ಕ್ಲಾತ್‌ಗಳನ್ನು ಬಳಸಿ. ಪೀಠೋಪಕರಣಗಳನ್ನು ಸ್ವಚ್ಛಗೊಳಿಸುವಾಗ ಅತಿಹೆಚ್ಚು ರಾಸಾಯನಿಕ ಮಿಶ್ರಿತ ದ್ರಾವಣ ಬಳಸಬೇಡಿ. ಸೂರ್ಯನ ಕಿರಣ ನೇರವಾಗಿ ಪೀಠೋಪಕರಣಗಳ ಮೇಲೆ ಬೀಳದಂತೆ ಇರಿಸಿ. ಕ್ಯಾಂಡಲ್ ಅಥವಾ ವ್ಯಾಕ್ಸ್ ಬೀಳದಂತೆ ನೋಡಿಕೊಳ್ಳಿ. ಎಣ್ಣೆ ಚೆಲ್ಲದಂತೆ ಎಚ್ಚರವಹಿಸಿ. ದೀರ್ಘಕಾಲ ಬಾಳಿಕೆ ಬರಲು 4-5 ವರ್ಷಗಳಿಗೊಮ್ಮೆ ಪಾಲಿಶ್ ಮಾಡಿಸಿ.