ಯಳಂದೂರು: ತಾಲೂಕಿನ ಯರಿಯೂರು ಗ್ರಾಮದಲ್ಲಿ ಸೋಮವಾರ ಮರದ ಕೊಂಬೆ ಮುರಿದು ಬಿದ್ದು ಮರದ ಕೆಳಗೆ ವಿರಮಿಸುತ್ತಿದ್ದ ಕೂಲಿ ಕಾರ್ಮಿಕ ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಗ್ರಾಮದ ನಿವಾಸಿಗಳಾದ ಕೆ. ನಾಗರಾಜು(45) ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿರುವ ಕುಮಾರ್ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ ಉಪ್ಪಾರ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ವಿವಾಹ ಮಹೋತ್ಸವಕ್ಕೆ ಬಂದಿದ್ದ ಕೆಲವರು ಇಲ್ಲಿರುವ ದೊಡ್ಡ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಮರದ ದೊಡ್ಡ ಕೊಂಬೆ ಮುರಿದು ಬೀಳುತ್ತಿತ್ತು. ಇದನ್ನು ಅರಿತ ಕೆಲವರು ತಕ್ಷಣ ಓಡಿ ಹೋದರು. ನಾಗರಾಜು ಹಾಗೂ ಕುಮಾರ್ ತೆರಳುವಷ್ಟರಲ್ಲೇ ಕೊಂಬೆ ಬಿದ್ದಿದ್ದರಿಂದ ತೀವ್ರವಾಗಿ ಗಾಯಗೊಂಡರು. ಇವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಕೆ. ನಾಗರಾಜು ಮೃತಪಟ್ಟರು. ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.