ತೀರ್ಥಹಳ್ಳಿ: ಮರಗಳು ಹಾಗೂ ಅರಣ್ಯದ ಕುರುಹುಗಳಿಲ್ಲದ ಜಾಗ ಒತ್ತುವರಿ ಮಾಡಿಕೊಂಡಿರುವವರಿಗೆ ಭೂ ಮಂಜೂರು ಮಾಡಲು ಕಾಯ್ದೆ ತರುವ ಪ್ರಯತ್ನ ನಡೆದಿದೆ. ಜತೆಗೆ ಬಹಳ ಕಾಲದಿಂದ ಅರಣ್ಯಭೂಮಿಯಲ್ಲಿ ನೆಲೆ ಕಂಡುಕೊಂಡಿರುವವರಿಗೆ ಹಕ್ಕುಪತ್ರ ನೀಡಲು ಅಡ್ಡಿಯಾಗಿರುವ 75 ವರ್ಷದ ದಾಖಲೆಯನ್ನು 25 ವರ್ಷಕ್ಕೆ ಇಳಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕು ಕಚೇರಿಯಲ್ಲಿ 43 ಲಾನುಭವಿಗಳಿಗೆ 94ಸಿ ಮತ್ತು ಬಗರ್‌ಹುಕುಂ ಹಕ್ಕು ಪತ್ರಗಳನ್ನು ವಿತರಿಸಿ ಮಾತನಾಡಿ, ಅರಣ್ಯ ಜಾಗದಲ್ಲಿ ವಾಸವಾಗಿರುವ ಪರಿಶಿಷ್ಟ ಸಮುದಾಯದವರಿಗೆ ಹಕ್ಕುಪತ್ರ ನೀಡಲು 5 ವರ್ಷದ ದಾಖಲೆ ಸಾಕು. ಆದರೆ ಉಳಿದ ಸಮುದಾಯಗಳಿಗೆ ನಿಗದಿ ಮಾಡಿರುವ 75 ವರ್ಷದ ಅವಧಿ ಅವೈಜ್ಞಾನಿಕವಾಗಿದ್ದು 25 ವರ್ಷಕ್ಕೆ ಇಳಿಸಲು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ರಾಜ್ಯದಿಂದ ನಿಯೋಗ ತೆರಳಲಾಗುವುದು ಎಂದು ತಿಳಿಸಿದರು.
ಹಳ್ಳದಲ್ಲಿ ಕೊಚ್ಚಿಹೋಗಿ ಮೃತಪಟ್ಟ ಸುಳುಗೋಡು ಭವಾನಿಯಮ್ಮ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ತರಿಸಿದ ಸಚಿವರು ಮಳೆಯಿಂದ ತಾಲೂಕಿನ್ಲಲಿ ಹಾನಿಯಾಗಿರುವ 56 ಮನೆಗಳಿಗೂ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಗಂಗಾಕಲ್ಯಾಣ ಯೋಜನೆಯ 8 ಫಲಾನುಭವಿಗಳಿಗೆ 3 ಲಕ್ಷ ರೂ. ವೆಚ್ಚದ ಪರಿಕರಗಳನ್ನು ವಿತರಿಸಿದರು. ತಹಸೀಲ್ದಾರ್ ಅಮೃತ್ ಆತ್ರೇಶ್, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಚಕ್ಕೋಡಬೈಲು ರಾಘವೇಂದ್ರ, ಸದಸ್ಯರಾದ ಟಿ.ಮಂಜುನಾಥ್, ಪದ್ಮಾ ನವೀನ್, ಲಕ್ಷ್ಮೀ ಉಮೇಶ್, ಜಿಪಂ ಮಾಜಿ ಸದಸ್ಯ ಕಾಸರವಳ್ಳಿ ಶ್ರೀನಿವಾಸ್, ಆಶ್ರಯ ಸಮಿತಿ ಸದಸ್ಯ ಯಡೂರು ಸುರೇಂದ್ರ, ತೂದೂರು ಗ್ರಾಪಂ ಅಧ್ಯಕ್ಷ ಮಧುರಾಜ್ ಹೆಗ್ಡೆ, ಮೇಳಿಗೆ ಗ್ರಾಪಂ ಅಧ್ಯಕ್ಷ ನಂಬಳ ಮುರುಳಿ ಇದ್ದರು.