ಜಿಲ್ಲೆ

ಮರಗಳ ಹನನ ಪ್ರಕರಣ: ಸಮಗ್ರ ತನಿಖೆಗೆ ಮೈಗ್ರಾಪ ಆಗ್ರಹ

ಮಂಜುನಾಥ ತಿಮ್ಮಯ್ಯ

ಮೈಸೂರು: ಹೈದರಾಲಿ ರಸ್ತೆಯಲ್ಲಿ 40 ಮರಗಳ ಹನನ ಮಾಡಿರುವುದನ್ನು ಸಮರ್ಥನೆ ಮತ್ತು ನಿರ್ಧಾರದ ಮೇಲೆ ಪ್ರಭಾವ ಬೀರುವಲ್ಲಿ ಭಾಗಿಯಾಗಿರುವ ಶಕ್ತಿಗಳು ಮತ್ತು ಕಾಣದ ಕೈಗಳ ಬಗ್ಗೆ ಸಹ ಸಮಗ್ರ ತನಿಖೆ ನಡೆಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮೈಸೂರು ಗ್ರಾಹಕರ ಪರಿಷತ್ ಆಗ್ರಹಿಸಿದೆ.

ಈ ಕುರಿತು ಸಚಿವರಿಗೆ ಪತ್ರ ಬರೆಯಲಾಗಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ದಟ್ಟಗಳ್ಳಿಯಲ್ಲಿ 175, ಮಾನಂದವಾಡಿ ರಸ್ತೆಯಲ್ಲಿ 125 ಮರಗಳನ್ನು ಕಡಿಯಲು ಗುರುತಿಸಿರುವುದು ಆಘಾತಕಾರಿಯಾಗಿದೆ. ಪರ್ಯಾಯ ಕಾರ್ಯಸಾಧ್ಯತೆಗಳ ಪರಿಶೀಲನೆ ಮಾಡುವವರೆಗೆ ಈ ಎರಡು ಯೋಜನೆಗಳನ್ನು ತಕ್ಷಣವೇ ಸ್ಥಗಿತ ಮಾಡುವಂತೆ ವಿನಂತಿಸಿದ್ದಾರೆ.

1976ರ ಕರ್ನಾಟಕ ಮರ ಸಂರಕ್ಷಣಾ ಕಾಯಿದೆಯನ್ನು ನವೀಕರಿಸುವ ಮತ್ತು ತಿದ್ದುಪಡಿ ಮಾಡುವ ಅಗತ್ಯವನ್ನು ತಾವು ಗುರುತಿಸಿರುವುದು ಸ್ವಾಗತಾರ್ಹ.

ಸಾರ್ವಜನಿಕ ಭೂಮಿಯಲ್ಲಿರುವ ಮರಗಳು ಮತ್ತು ಅವುಗಳ ಸಂರಕ್ಷಣೆಯನ್ನು ನೋಡಿಕೊಳ್ಳುವ ಸರ್ಕಾರಿ ಇಲಾಖೆಗಳನ್ನು ಮರ ಸಂರಕ್ಷಣೆ ಕಾಯಿದೆಯ ವ್ಯಾಪ್ತಿಗೆ ತರುವುದು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸರಿಯಾದ ಹೊಣೆಗಾರಿಕೆಯನ್ನು ನಿಗದಿಪಡಿಸುವುದು ಸಹ ಅತ್ಯಗತ್ಯ ಎಂದು ಸಲಹೆ ನೀಡಲಾಗಿದೆ. ಈ ಕಾಯಿದೆಯ ತಿದ್ದುಪಡಿಯನ್ನು ಕಾಲಮಿತಿಯೊಳಗೆ ಜಾರಿಗೆ ತರುವಂತೆಯೂ ಕೋರಿದ್ದಾರೆ.

ಜವಾಬ್ದಾರಿಯುತ ನಾಗರಿಕರಾಗಿ ಯಾವತ್ತೂ ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶ ವಿಷಾದಕರ. ಅಭಿವೃದ್ಧಿ ಆಗಲೇಬೇಕಾದರೂ ಪ್ರಕೃತಿಯನ್ನು ಸಂರಕ್ಷಿಸಬೇಕು ಎಂಬ ತಮ್ಮ ಅಭಿಪ್ರಾಯವನ್ನು ಬಲವಾಗಿ ಒಪ್ಪುತ್ತೇವೆ.

ರಾಜ್ಯದ ಅರಣ್ಯ ಸಚಿವರಾಗಿ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಕರ್ನಾಟಕದ ಪ್ರಕೃತಿ, ಪರಿಸರ ಮತ್ತು ಹಸಿರು ಹೊದಿಕೆಯನ್ನು ರಕ್ಷಿಸುವಂತೆ ಎಂಜಿಪಿ ಕಾರ್ಯಾಧ್ಯಕ್ಷೆ ಎಸ್.ಶೋಭನಾ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ಅಧ್ಯಕ್ಷ ಕಮಲ್ ಗೋಪಿನಾಥ್ ಪತ್ರದಲ್ಲಿ ವಿನಂತಿಸಿದ್ದಾರೆ.