ಬೇಲೂರು: ಕಳೆದ ಹತ್ತು ದಿನಗಳಿಂದ ನಾಪತ್ತೆಯಾಗಿದ್ದ ತಾಲೂಕಿನ ಆಂದಲೆ ಗ್ರಾಮದ ಬಸವಶೆಟ್ಟಿ ಎಂಬುವರು ಬಿಕ್ಕೋಡು ಹೋಬಳಿಯ ಬಿಳಗುಲಿ ಗ್ರಾಮದ ಸಮೀಪ ಮರಕ್ಕೆ ನೇಣು ಹಾಕಿಕೊಂಡು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೇಲೂರು ತಾಲೂಕಿನ ಆಂದಲೆ ಗ್ರಾಮದ ಬಸವಶೆಟ್ಟಿ ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹತ್ತು ದಿನಗಳ ಹಿಂದೆ ಮನೆಯಿಂದ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ನಾಪತ್ತೆಯಾಗಿದ್ದರು. ಬಸವಶೆಟ್ಟಿ ಅನಾರೋಗ್ಯ ಕಾರಣದಿಂದ ಮನನೊಂದು ಗ್ರಾಮದಿಂದ 30 ಕಿ.ಮೀ. ದೂರದ ಬಿಕ್ಕೋಡು ಸಮೀಪದ ಬಿಳಗುಲಿ ಗ್ರಾಮಕ್ಕೆ ತೆರಳಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಬಸವಶೆಟ್ಟಿ ನಾಪತ್ತೆಯಾಗಿರುವ ಬಗ್ಗೆ ಕೆಲ ದಿನಗಳ ಹಿಂದೆ ಅವರ ಮಕ್ಕಳು ಹಳೇಬೀಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹತ್ತು ದಿನಗಳ ನಂತರ ಬಿಕ್ಕೋಡು ಹೋಬಳಿಯ ಬಿಳಗುಲಿ ಗ್ರಾಮದ ಸಮೀಪದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಜೇಬಿನಲ್ಲಿದ್ದ ಆಸ್ಪತ್ರೆ ಚೀಟಿಯಿಂದ ಮೃತದೇಹ ಬಸವಶೆಟ್ಟಿ ಅವರದ್ದೇ ಎಂದು ತಿಳಿದುಬಂದಿದೆ.
ಅರೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹದ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮೃತರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ.