ಜಿಲ್ಲೆ

ಮರಕ್ಕೆ ನೇಣು ಬಿಗಿದುಕೊಂಡು ವೈದ್ಯ ಆತ್ಮಹತ್ಯೆ

  • ಮದ್ದೂರು: ತಾಲೂಕಿನ ಕುದುರಗುಂಡಿ ಗ್ರಾಮದ ಕೆರೆಯ ಬಳಿ ಖಾಸಗಿ ಆಸ್ಪತ್ರೆಯ ವೈದ್ಯ ಗುರುವಾರ ರಾತ್ರಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

  • ಮಂಡ್ಯದ ಉಮ್ಮಡಹಳ್ಳಿ ಗೇಟ್ ಸಮೀಪವಿರುವ ಸಾಂಜೋ ಆಸ್ಪತ್ರೆಯ ಖ್ಯಾತ ತಜ್ಞವೈದ್ಯ ಡಾ.ವೇಣುಗೋಪಾಲ್ (58) ಆತ್ಮಹತ್ಯೆ ಮಾಡಿಕೊಂಡವರು.

  • ಗುರುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಇವರು, ಹಲವು ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ಮಧ್ಯಾಹ್ನ ಆಸ್ಪತ್ರೆಯಿಂದ ಹೊರಟು, ಮದ್ದೂರಿನ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ತೆರಳಿದ್ದಾರೆ. ರಾತ್ರಿ 10 ಗಂಟೆ ವೇಳೆಗೆ ತಾಲೂಕಿನ ಕುದುರಗುಂಡಿ ಗ್ರಾಮದ ಕೆರೆಯ ಬಳಿ ಆಗಮಿಸಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
    ಗ್ರಾಮಸ್ಥರು ಶುಕ್ರವಾರ ಬೆಳಗ್ಗೆ ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಶವವನ್ನು ರವಾನಿಸಲಾಯಿತು.

  • ಡಾ.ವೇಣುಗೋಪಾಲ್ ಅವರ ತಂಗಿ ಗಾಯತ್ರಿ 1 ವರ್ಷದ ಹಿಂದೆ ಮೃತಪಟ್ಟಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಡಾ.ವೇಣುಗೋಪಾಲ್ ಅವರ ಬಾಮೈದ ಡಾ.ವಿ.ವೈ.ನಂದ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಮದ್ದೂರು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.