ಯಲ್ಲಾಪುರ: ಕಾರೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ 6 ಪ್ರಯಾಣಿಕರು ಗಾಯಗೊಂಡ ಘಟನೆ ತಾಲೂಕಿನ ದೇಶಪಾಂಡೆನಗರದ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಮಂಗಳವಾರ ಸಂಭವಿಸಿದೆ.
ಹುಬ್ಬಳ್ಳಿಯ ಯಲ್ಲಾಪುರ ಓಣಿಯ ಆನಂದ ಅಶೋಕ ಶಿರಸಂಗಿ, ನಂದಿತಾ ಸಂದೀಪ ಅಂಗಡಿ, ರಿತೇಶ ಸೋಮನಾಥ ಹಿರೇಮಠ, ವಿನಾಯಕ ಸಿದ್ಧಲಿಂಗಪ್ಪ ಸಂಶಿ, ಪಲ್ಲವಿ ಶರಣಪ್ಪ ನಾಯಕೊಡಿ ಹಾಗೂ ಚಾಲಕ ಸಂದೀಪ ಬಸವರಾಜ ಅಂಗಡಿ ಗಾಯಗೊಂಡವರು.
ಇವರು ಕಾರಿನಲ್ಲಿ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿರುವಾಗ ದೇಶಪಾಂಡೆನಗರದ ಸಮೀಪದ ತಿರುವೊಂದರಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗಟಾರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಜಖಂಗೊಂಡಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.