ಜಿಲ್ಲೆ

ಮರಕಡಿತಲೆ ವಿರುದ್ಧ ಕ್ರಮ ಕೈಗೊಳ್ಳಿ

ಸಾಗರ: ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಕಡಿತಲೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಸಿಎಂ, ಸಂಸದರು, ಶಾಸಕರು ನಮಗೆ ಗೊತ್ತಿದೆ. ಅವರಿಂದಲೇ ಫೋನ್ ಮಾಡಿಸುತ್ತೇವೆ ಎನ್ನುವವರನ್ನು ನಂಬಲೇಬೇಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಹರತಾಳು ಹಾಲಪ್ಪ ಸೂಚಿಸಿದರು.

ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮರಗಳ್ಳತನ ಹಿನ್ನೆಲೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಅರಣ್ಯಾಧಿಕಾರಗಳ ಸಭೆ ನಡೆಸಿದ ಅವರು, ಕೆಲವರಿಗೆ ಮರಗಳ ಅಕ್ರಮ ಸಾಗಾಟವೇ ದಂಧೆಯಾಗಿದೆ. ಇಂಥವರಿಂದ ಅರಣ್ಯ ನಾಶವಾಗುತ್ತಿದ್ದು ಅರಣ್ಯ ಇಲಾಖೆಯ ಆಡಳಿತ ವೈಫಲ್ಯವೇ ಇದಕ್ಕೆ ಕಾರಣ ಎಂದರು.

ಕರೂರು ಹೋಬಳಿಯ ಮಿಂಚು ಗ್ರಾಮದ ಸರ್ವೆ ನಂ. 160 ಮತ್ತು 165ರಲ್ಲಿ ಪ್ರಭಾವಿಗಳು 50ಕ್ಕೂ ಹೆಚ್ಚು ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನೀವೇನು ಮಾಡುತ್ತಿದ್ದೀರಿ? ತಕ್ಷಣ ಒತ್ತುವರಿ ತೆರವು ಮಾಡಿದಿದ್ದರೆ ನಿಮ್ಮ ವಿರುದ್ಧವೇ ಕ್ರಮ ಅನಿವಾರ್ಯ ಎಂದು ವಲಯ ಅರಣ್ಯಾಧಿಕಾರಿಗೆ ಶಾಸಕರು ಎಚ್ಚರಿಸಿದರು.

ಎಸಿ ಡಾ. ಎಲ್.ನಾಗರಾಜ್, ಡಿವೈಎಸ್ಪಿ ವಿನಾಯಕ್ ಎಸ್.ಶೆಟ್ಟಿಗಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಮೂರ್ತಿ, ವಲಯ ಅರಣ್ಯಾಧಿಕಾರಿ ಡಿ.ಆರ್.ಪ್ರಮೋದ್, ತಹಸೀಲ್ದಾರ್ ಚಂದ್ರಶೇಖರ ನಾಯ್್ಕ ಪೌರಾಯುಕ್ತ ಎಚ್.ಕೆ.ನಾಗಪ್ಪ ಇದ್ದರು.

ಈಚೆಗೆ ಸೂರನಗದ್ದೆ ಮತ್ತು ಮಂಕೋಡು ಗ್ರಾಮದಲ್ಲಿ 85 ಅಕೇಶಿಯಾ ಮರ ಕಡಿತಲೆ ಮಾಡಿ ಸಾಗಿಸಲಾಗಿದೆ. ಮರ ಕಡಿತಲೆಗೆ ಮೆಸ್ಕಾಂನವರು 11ಕೆವಿ ವಿದ್ಯುತ್ ತಂತಿಯ ಸಂಪರ್ಕ ಕಡಿತಗೊಳಿಸಿದ್ದಾರೆ. ಮರಗಳ್ಳರಿಗೆ ಮೆಸ್ಕಾಂ, ಅರಣ್ಯ ಇಲಾಖೆ ಬೆಂಗಾವಲಾಗಿ ನಿಂತಂತಿದೆ. ಅಕ್ರಮಕ್ಕೆ ಸಹಕರಿಸಿದವರಿಗೆ ನೋಟಿಸ್ ನೀಡಿ. ಅಕ್ರಮ ಕುರಿತು ಸಂಬಂಧಿಸಿದ ಸಚಿವರಿಗೆ ಪತ್ರ ಬರೆಯಲಾಗಿದೆ.

| ಹರತಾಳು ಹಾಲಪ್ಪ, ಶಾಸಕ