ಹುಣಸೂರು ತಾಲೂಕು ಬಿಳಿಕೆರೆಯಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಉದ್ಘಾಟಿಸಿದರು. ಜಿ.ಡಿ.ಹರೀಶ್‌ಗೌಡ, ಶಿವಶೇಖರ್, ಮಂಚಮ್ಮ, ವರದರಾಜು ಇತರರು ಇದ್ದರು. 
ಜಿಲ್ಲೆ

ಮರ ಬೆಳೆಸುವುದರೊಂದಿಗೆ ಕೆರೆ-ಕಟ್ಟೆಗಳನ್ನೂ ಉಳಿಸಿ

ನಾಗೇಶ ಎಸ್

ಹುಣಸೂರು: ಮರ, ಗಿಡಗಳನ್ನು ಬೆಳೆಸುವುದರೊಂದಿಗೆ ಕೆರೆಕಟ್ಟೆಗಳನ್ನೂ ಉಳಿಸಿಕೊಳ್ಳುವ ಜವಾಬ್ದಾರಿ ಸಾರ್ವಜನಿಕರ ಮೇಲಿದೆ ಎಂದು ಶತಾಯುಷಿ ಸಾಲುಮರದ ತಿಮ್ಮಕ್ಕ ಹೇಳಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಸೋಮವಾರ ತಾಲೂಕಿನ ಬಿಳಿಕೆರೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಆವರಣದಲ್ಲಿ ಗಿಡನೆಟ್ಟು ಮಾತನಾಡಿದರು.

ಮದುವೆಯಾಗಿ 5-6 ವರ್ಷಗಳಾದರೂ ಮಕ್ಕಳಾಗದ ನಮಗೆ ಸಸಿಗಳನ್ನು ನೆಟ್ಟು ಅವುಗಳನ್ನೇ ನಮ್ಮ ಮಕ್ಕಳೆಂದು ಪೋಷಿಸಿದೆವು. ಮರ ಕಡಿಯಲು ಬಂದವರ ಜತೆಗೆ ಜಗಳಕ್ಕೆ ಬಿದ್ದು ಉಳಿಸಿಕೊಂಡ ಘಟನೆಗಳೂ ನನ್ನ ಜೀವನದಲ್ಲಿ ನಡೆದಿವೆ. ಇಡೀ ವಿಶ್ವಕ್ಕೆ ಸಂಸ್ಕಾರವನ್ನು ಕಲಿಸಿಕೊಟ್ಟ ನಮ್ಮ ಭಾರತಕ್ಕೆ ಇಂದು ವಿದೇಶಿಯರು ಸಂಸ್ಕಾರ ಕಲಿಸುವಂತಾಗಿದೆ. ಪ್ರಕೃತಿಯನ್ನು ಪೂಜಿಸುವ ನಮಗೆ, ಅದನ್ನು ಉಳಿಸಿಕೊಳ್ಳುವ ಸ್ಥಿತಿ ಬಂದಿದೆ. ಸರ್ಕಾರಗಳು ಪರಿಸರ ಸಂರಕ್ಷಣೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿರಬಹುದು. ಆದರೆ ಸಾರ್ವಜನಿಕರ ಸಹಭಾಗಿತ್ಯವಿಲ್ಲದೇ ಯೋಜನೆ ಸಫಲತೆ ಕಾಣದು. ಕೇವಲ ಮರ, ಗಿಡಗಳನ್ನು ಸಂರಕ್ಷಿಸಿದರೆ ಸಾಲದು. ನಿಮ್ಮ ಸುತ್ತಮುತ್ತಲಿನ ಕೆರೆ-ಕಟ್ಟೆಗಳನ್ನು ಸಂರಕ್ಷಿಸಿಕೊಳ್ಳಬೇಕು. ಜತೆಗೆ ಕಣ್ಮರೆಯಾದ ಕೆರೆಗಳನ್ನು ಪುನರುಜ್ಜೀವನಗೊಳಿಸಿಕೊಳ್ಳುವಂತೆ ಕರೆ ನೀಡಿದರು.

ಸಾಲುಮರದ ತಿಮ್ಮಕ್ಕನ ಸಾಕುಮಗ ಉಮೇಶ್ ಮಾತನಾಡಿ, ಶತಾಯುಷಿ ತಿಮ್ಮಕ್ಕ ಬಿಬಿಸಿ ಚಾನಲ್ ಕೊಡಮಾಡುವ ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿಗೆ ಸೇರಿದ್ದಾರೆ. ಪ್ರತಿದಿನ 30-40 ಲಕ್ಷ ಮಂದಿ ತಿಮ್ಮಕ್ಕನ ಕುರಿತು ವಿವಿಧ ಮಾಧ್ಯಮಗಳ ಮೂಲಕ ಮಾಹಿತಿ ಪಡೆಯುತ್ತಾರೆ. ವೃಕ್ಷಮಾತೆ ಆಗಿರುವ ತಿಮ್ಮಕ್ಕನ ಸಾಧನೆ ಸೂರ್ಯಚಂದ್ರರಿರುವಷ್ಟು ದಿನ ಭೂಮಿಯ ಮೇಲಿರಲಿದೆ. ಮುಂದಿನ ಪೀಳಿಗೆಗೆ ಶುದ್ಧ ಪರಿಸರ ಬಿಟ್ಟುಹೋಗುವ ಮಾತಿರಲಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಮಲಿನತೆಯನ್ನು ತೊಡೆಯುವುದು ಹೇಗೆಂದು ಯೋಚಿಸಬೇಕಾದ ಪರಿಸ್ಥಿತಿ ಇದೆ ಎಂದು ವಿಷಾದಿಸಿದರು.

ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಕಳೆನಾಶಕ ನಿಷೇಧದ ಕುರಿತು ಶಾಸಕ ಹರೀಶ್‌ಗೌಡ ಅವರು ಸರ್ಕಾರವನ್ನು ಒತ್ತಾಯಿಸಬೇಕು. ಪರಿಸರ ನಾಶದ ಜತೆಗೆ ಮನುಷ್ಯನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿರುವ ಕಳೆನಾಶಕದ ದುಷ್ಪರಿಣಾಮಗಳ ಕುರಿತು ರೈತರಲ್ಲಿ ಅರಿವು ಮೂಡಿಸಬೇಕಿದೆ ಎಂದು ಮನವಿ ಮಾಡಿದರು.

ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ದಿನನಿತ್ಯದ ಕಾಯಕವಾಗಬೇಕಿದೆ. ವಿದ್ಯಾರ್ಥಿಗಳು ಪರಿಸರ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು. ಜಾಗತಿಕ ತಾಪಮಾನ ಏರುಪೇರಿಗೆ ಭಾರತೀಯರ ಕೊಡುಗೆಯೂ ಇರುವುದು ಬೇಸರದ ಸಂಗತಿ ಎಂದರು.

ತಾಲೂಕಿನಲ್ಲಿ ಒಂದೇ ದಿನದಲ್ಲಿ ತಾಲೂಕು ಆಡಳಿತದ ವತಿಯಿಂದ 50 ಸಾವಿರ ಸಸಿಗಳನ್ನು ನೆಡುವ ಕಾರ್ಯ ಯಶಸ್ವಿಯಾಗಿ ನಡೆದಿದೆ. ಸಸಿ ನೆಟ್ಟವರು ಮುಂದಿನ ವರ್ಷದವರೆಗೆ ಉತ್ತಮವಾಗಿ ಪಾಲನೆ ಮಾಡುವವರನ್ನು ಗುರುತಿಸಿ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದರು.

ಬಿಳಿಕೆರೆ ಗ್ರಾಪಂ ಅಧ್ಯಕ್ಷ ಶಿವಶೇಖರ್, ಉಪಾಧ್ಯಕ್ಷೆ ಮಂಚಮ್ಮ, ಸದಸ್ಯರಾದ ಯೋಗೀಶ್, ಮಹೇಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜ್, ಎಸ್‌ಡಿಎಂಸಿ ಅಧ್ಯಕ್ಷ ವರದರಾಜು, ದೀಪು, ಗ್ರಾಮದ ಮುಖಂಡರಾದ ಧಣಿಕುಮಾರ್, ಸುಬ್ಬಣ್ಣ, ಜಲೇಂದ್ರ ಇತರರು ಇದ್ದರು.