ಜಿಲ್ಲೆ

ಮರ ಬಿದ್ದು ಇಬ್ಬರು ಮಹಿಳೆಯರು ಸಾವು

ಚಿಕ್ಕಮಗಳೂರು: ಮಲೆನಾಡಿನಲ್ಲಿ ಗಾಳಿ ಮಳೆ ಆರ್ಭಟಕ್ಕೆ ಮತ್ತೆರಡು ಜೀವಹಾನಿಯಾಗಿದೆ. ಮಂಗಳವಾರ ರಾತ್ರಿ ಮೂಡಿಗೆರೆ ತಾಲೂಕು ಕೂವೆ ಗ್ರಾಮ ಪಂಚಾಯಿತಿ ಕೆ.ತಲಗೂರು ಗ್ರಾಮದಲ್ಲಿ ಮನೆ ಮೇಲೆ ಬೃಹತ್ ಮರ ಬಿದ್ದು ಸರಿತಾ (37), ಚಂದ್ರಮ್ಮ (55) ಎಂಬುವರು ಮೃತಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಆರು ಮಂದಿ ಜೀವ ತೆತ್ತಂತಾಗಿದೆ. ಸಿಂಸೆಯಲ್ಲಿ ಕೊಟ್ಟಿಗೆ ಕುಸಿದು ದನ ಸಾವನ್ನಪ್ಪಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಆ.11ರಂದು ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ.

ಮೂಡಿಗೆರೆ ತಾಲೂಕಿನಲ್ಲಿ ಗಾಳಿ-ಮಳೆ ಅಬ್ಬರಕ್ಕೆ ಹಲವು ಮನೆಗಳು ಬಿದ್ದಿವೆ. 54 ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಚಿಕ್ಕಮಗಳೂರಿನ ಹಿರೇಮಗಳೂರಲ್ಲಿ ಎರಡು ಮನೆಗಳು ಸಂಪೂರ್ಣ ಕುಸಿದಿವೆ. </p><p>ಹಿರೇಮಗಳೂರು ಪರಶುರಾಮ ದೇವಾಲಯದ ಪಕ್ಕದಲ್ಲಿರುವ ಶಾರದಮ್ಮ ಹಾಗೂ ಚಿಕ್ಕರಂಗಯ್ಯ ಎಂಬುವರ ಮನೆಗಳು ಕುಸಿದಿವೆ. ನಗರಸಭೆ ಅಧಿಕಾರಿ ವೆಂಕಟೇಶ್, ಸಿಬ್ಬಂದಿ ಬುಧವಾರ ಸ್ಥಳ ಪರಿಶೀಲಿಸಿದರು.

ಕೂವೆ ಗ್ರಾಮ ಪಂಚಾಯಿತಿ ಕೆ.ತಲಗೂರು ಗ್ರಾಮದಲ್ಲಿ ಮನೆ ಮೇಲೆ ಬೃಹತ್ ಮರ ಬಿದ್ದು ಸರಿತಾ, ಚಂದ್ರಮ್ಮ ಮೃತಪಟ್ಟಿದ್ದಾರೆ. ರಾತ್ರಿ ಊಟ ಮಾಡಿ ಸರಿತಾ, ಆಕೆಯ ಚಿಕ್ಕಮ್ಮ ಚಂದ್ರಮ್ಮ ಮಲಗಿದ್ದರು. ಸರಿತಾ ಮಕ್ಕಳಾದ ಸುನೀಲ್, ದೀಕ್ಷಿತ್ ಓದಿಕೊಳ್ಳುತ್ತಿದ್ದರು. 10 ಗಂಟೆ ಸುಮಾರಿಗೆ ಗಾಳಿ ಮಳೆಯಿಂದಾಗಿ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಸರಿತಾ ಸ್ಥಳದಲ್ಲೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಮ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟರು.

ಮನೆ ಮೇಲೆ ಮರ ಬೀಳುವ ಸ್ಥಿತಿಯಲ್ಲಿರುವುದರಿಂದ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಸರಿತಾ ಹಾಗೂ ಚಂದ್ರಮ್ಮ ಕೆಲ ತಿಂಗಳ ಹಿಂದೆ ಮನವಿ ಮಾಡಿದ್ದರು. ಆದರೆ ಅರಣ್ಯ ಇಲಾಖೆ ಮರ ತೆರವಿಗೆ ನಿರ್ಲಕ್ಷ್ಯ ತೋರಿದ್ದರಿಂದ ಅನಾಹುತ ಸಂಭವಿಸಿದೆ ಎಂದು ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದೆ.

ಮರ ತೆರವುಗೊಳಿಸುವಂತೆ ಸರಿತಾ ಹಾಗೂ ಚಂದ್ರಮ್ಮ ಕೆಲ ತಿಂಗಳ ಹಿಂದೆ ಮನವಿ ಮಾಡಿಕೊಳ್ಳುತ್ತಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಾಳಿ-ಮಳೆಗೆ ಮರ ಮನೆ ಮೇಲೆ ಬಿದ್ದರೆ ಜೀವ ಕಳೆದುಕೊಳ್ಳಬೇಕಾಗುತ್ತದೆ. ಅರಣ್ಯ ಇಲಾಖೆ ಮರ ತೆರವುಗೊಳಿಸಬೇಕು ಎನ್ನುವ ಸರಿತಾ ಅವರ ಸಂಭಾಷಣೆ ವಿಡಿಯೋದಲ್ಲಿದೆ.