ಜಿಲ್ಲೆ

ಮಮದಾಪುರದಲ್ಲಿ ಮಾದರಿ ಕಿರು ಅರಣ್ಯ ನಿರ್ಮಾಣಕ್ಕೆ ಶಾಸಕ ಎಂ.ಬಿ. ಪಾಟೀಲ ಒತ್ತಾಯ

ವಿಜಯಪುರ: ಬಬಲೇಶ್ವರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮಮದಾಪುರ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ಕಿರು ಅರಣ್ಯ ಪ್ರದೇಶವಾಗಿ ಅಭಿವೃದ್ಧಿ ಪಡಿಸಲು ಕೋರಿ ಮಾಜಿ ಸಚಿವ ಎಂ.ಬಿ.ಪಾಟೀಲ ಬುಧವಾರ ಅರಣ್ಯ ಸಚಿವ ಆನಂದ ಸಿಂಗ್ ಅವರನ್ನು ಭೇಟಿ ಮಾಡಿ ವಿನಂತಿಸಿದರು.

ವಿಧಾನಸೌಧದಲ್ಲಿ ಅರಣ್ಯ ಸಚಿವರನ್ನು ಭೇಟಿ ಮಾಡಿದ ಅವರು, ಮಮದಾಪುರ ಗ್ರಾಮದ ಸರ್ವೇ ನಂ.345ಪಿ, 390ಪಿ, 401,347,398 ಹಾಗೂ ಕಾಖಂಡಕಿ ಗ್ರಾಮದ ಸರ್ವೇ ನಂ.815ಪಿ ಗಳಲ್ಲಿ ಒಟ್ಟು 630.67ಹೆಕ್ಟರ್ ಪ್ರದೇಶ ಅರಣ್ಯ ಭೂಮಿ ಇರುತ್ತದೆ. ಈ ಅರಣ್ಯ ಪ್ರದೇಶ ದಟ್ಟವಾದ ಬಳ್ಳಾರಿ ಜಾಲಿಯಿಂದ ಬೆಳೆದು ನಿಂತಿದ್ದು, ಅನುಪಯುಕ್ತವಾಗಿದೆ. ಉಳಿದ ಭಾಗದಲ್ಲಿ ನೆಡುತೋಪು ಇದ್ದು, ಮತ್ತು ಸ್ಪಲ್ಪ ಭಾಗ ಮಮದಾಪುರ ಕೆರೆ ನೀರಿನಿಂದ ಆವೃತ್ತವಾಗಿರುತ್ತದೆ. ಈ ಪ್ರದೇಶದಲ್ಲಿ ಸುತ್ತಲು ಬೇಲಿ ಅಳವಡಿಸಿ, ಅರಣ್ಯ ಅಭಿವೃದ್ಧಿ ಪಡಿಸಿದರೆ, ಲವತ್ತಾದ ಮಣ್ಣು ಹಾಗೂ ನೀರಿನ ಸೌಕರ್ಯದಿಂದ ಇಲ್ಲಿ ಮಾದರಿ ಕಿರು ಅರಣ್ಯ ನಿರ್ಮಿಸಬಹುದು. ಈ ಕುರಿತು ಈಗಾಗಲೇ ವಿಜಯಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು 3379.04ಲಕ್ಷ ಮೊತ್ತದ ವಿವರವಾದ ಪ್ರಸ್ತಾವನೆಯಲ್ಲಿ ಮಂಜೂರಾತಿಗಾಗಿ ಸಲ್ಲಿಸಿದ್ದು, ವಿಶೇಷ ಪ್ರಕರಣ ಎಂದು ಈ ಮೊತ್ತವನ್ನು ಮಂಜೂರಿಸಿ, ಮಾದರಿ ಕಿರು ಅರಣ್ಯ ನಿರ್ಮಿಸಲು ಎಂ.ಬಿ.ಪಾಟೀಲ ವಿನಂತಿಸಿದರು.