ಕೆ.ಎಂ.ದೊಡ್ಡಿ: ಕಳೆದ ಒಂದು ವಾರದಿಂದ ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಕೇಳಿಬಂದಿರೋದು ಆಶ್ಚರ್ಯ ತಂದಿದೆ ಶಾಸಕ ಕದಲೂರು ಉದಯ್ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮದ್ದೂರು ಕ್ಷೇತ್ರದ ಜನತೆ ಆಶೀರ್ವದಿಸಿ ಶಾಸಕನನ್ನಾಗಿ ಮಾಡಿದ್ದು ಕ್ಷೇತ್ರದಲ್ಲಿ ಜನರು ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಜವಾಬ್ದಾರಿಗಳನ್ನು ನೀಡಿದ್ದಾರೆ. ಆ ಜವಾಬ್ದಾರಿಗಳನ್ನು ನಿರ್ವಹಿಸಲು ಹೆಚ್ಚಿನ ಸಮಯ ಬೇಕಿರುವುದರಿಂದ ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಆಸಕ್ತಿ ಇಲ್ಲ. ಅಧ್ಯಕ್ಷ ಸ್ಥಾನದ ಆಯ್ಕೆಗೆ ಕಾಲಾವಕಾಶ ಇರುವುದರಿಂದ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರನ್ನು ಏಕೆೆ ತರುತಿದ್ದಾರೆ ಎಂಬುದು ಗೊತ್ತಿಲ್ಲ ಎಂದು ತಿಳಿಸಿದರು.
ಮುಂಬರುವ ಬಜೆಟ್‌ನಲ್ಲಿ ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿ ಹೆಚ್ಚಿನ ಅನುದಾನ ಕೇಳಿದ್ದೇನೆ. ಮುಖ್ಯವಾಗಿ ನಮ್ಮ ಕ್ಷೇತ್ರದಲ್ಲಿನ ಹಲವು ರೈತ ಕುಟುಂಬಗಳಿಗೆ ಆಸರೆಯಾಗಿರುವ ಸೂಳೆಕೆರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡಬೇಕು ಎಂದು ಕೋರಿದ್ದೇನೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಮದ್ದೂರು ಭಾಗದ ನಾಲೆಗಳ ಆಧುನೀಕರಣ, ಕಾಲುವೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದ್ದು ಮದ್ದೂರು ಪಟ್ಟಣದ ಪೇಟೆ ಬೀದಿ ರಸ್ತೆಯನ್ನು ನೂರು ಅಡಿ ರಸ್ತೆಯನ್ನು ನಿರ್ಮಾಣ ಮಾಡಿ ಜನರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಲು ಕಾರ್ಯಯೋಜನೆ ರೂಪಿಸಿದ್ದೇನೆ ಎಂದರು.
ಮದ್ದೂರು ನ್ಯಾಯಲಯದ ಸಂಕೀರ್ಣ ಕಿರಿದಾಗಿರುವುದರಿಂದ ಸುಮಾರು 30 ಕೋಟಿ ರೂ.ವೆಚ್ಚದಲ್ಲಿ ಹೊಸ ನ್ಯಾಯಲಯ ನಿರ್ಮಾಣ ಮಾಡಲು ಸರ್ಕಾರಕ್ಕೆ ಕೋರಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದು ಹಂತ ಹಂತವಾಗಿ ಕಾರ್ಯಗತ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್, ಭಾರತೀನಗರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರಜಾಪ್ರಿಯ ವೆಂಕಟೇಶ್, ಮುಖಂಡರಾದ ಮಹೇಶ್, ಕರಡಕೆರೆ ಮನು, ಅಣ್ಣೂರು ರಾಘವೇಂದ್ರ ಉಪಸ್ಥಿತರಿದ್ದರು.