ಚಿಟಗುಪ್ಪ ತಾಲೂಕಿನ ಮನ್ನಾಎಖ್ಖೇಳ್ಳಿ ಗ್ರಾಮದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ತಲೆ ಎತ್ತಿದ್ದ ಗೂಡಂಗಡಿಗಳನ್ನು ಶನಿವಾರ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು. 
ಜಿಲ್ಲೆ

ಮನ್ನಾಎಖ್ಖೇಳ್ಳಿಯಲ್ಲಿ ಬುಲ್ಡೋಜರ್ ಸದ್ದು

ಚಿಟಗುಪ್ಪ: ಮನ್ನಾಎಖ್ಖೇಳ್ಳಿ ಗ್ರಾಮದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಮುಂಭಾಗದ ಕಂಪೌಂಡ ಗೋಡೆಗೆ ಹೊಂದಿಕೊಂಡು ತಲೆಎತ್ತಿದ್ದ ಹಲವು ಅನಧಿಕೃತ ಅಂಗಡಿಗಳನ್ನು ತಾಲೂಕು ಆಡಳಿತ ಹಾಗೂ ಗ್ರಾಪಂ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ಶನಿವಾರ ಬೆಳ್ಳಂಬೆಳಗ್ಗೆ ಜೆಸಿಬಿ ಮೂಲಕ ಮಿಂಚಿನ ಕಾರ್ಯಾಚರಣೆ ಕೈಗೊಂಡು ತೆರವುಗೊಳಿಸಿದರು. ತೆರವು ಕಾರ್ಯಾಚರಣೆ ವೇಳೆ ವ್ಯಾಪಾರಿಗಳ ಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದು, ಕೆಲಕಾಲ ಗೊಂದಲ, ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು.

ಸುಮಾರು ೪೦ಕ್ಕೂ ಹೆಚ್ಚು ವ್ಯಾಪಾರಿಗಳು ಅನಧಿಕೃತವಾಗಿ ಅಂಗಡಿಗಳನ್ನು ಹಾಕಿ ವ್ಯಾಪಾರ ನಡೆಸುತ್ತಿದ್ದರು. ತೆರವು ಕಾರ್ಯಾಚರಣೆ ಆರಂಭಿಸಿದ ಬಳಿಕ ವ್ಯಾಪಾರಿಗಳು ಅಂಗಡಿ ಖಾಲಿ ಮಾಡಲು ಆರಂಭಿಸಿದರು.

ಗ್ರಾಮ ಪಂಚಾಯಿತಿ ಕಳೆದ ಹಲವು ದಿನಗಳಿಂದ ಅಂಗಡಿ ತೆರವುಗೊಳಿಸುವಂತೆ ಮಾಲೀಕರಿಗೆ ನೋಟಿಸ್ ಮತ್ತು ಧ್ವನಿವರ್ಧಕ ಮೂಲಕ ತೆರವು ಕಾರ್ಯಾಚರಣೆ ನಡೆಸುವ ಮಾಹಿತಿ ನೀಡಿದರೂ ಶನಿವಾರದ ಬೆಳಗ್ಗೆವರೆಗೂ ಅಂಗಡಿಗಳಲ್ಲಿನ ವಸ್ತುಗಳನ್ನು ಖಾಲಿ ಮಾಡಿರಲಿಲ್ಲ. ಅಂಗಡಿ ಮುಂಗ್ಗಟ್ಟುಗಳನ್ನು ತೆರವುಗೊಳಿಸಿದ್ದರಿಂದ ಸಣ್ಣ ಪುಟ್ಟ ವ್ಯಾಪಾರಿಗಳು ಬದುಕು ಬೀದಿಗೆ ಬೀಳುವಂತಾಯಿತು.

ತಹಸೀಲ್ದಾರ್ ಮಂಜುನಾಥ ಪಂಚಾಳ, ತಾಪಂ ಇಒ ಲಕ್ಷ್ಮೀ ಬಿರಾದಾರ, ಸಿಪಿಐ ಗುರು ಪಾಟೀಲ, ಪಿಎಸ್‌ಐಗಳಾದ ಮಹೇಂದ್ರಕುಮಾರ, ನಿಂಗಪ್ಪ ಮಣ್ಣೂರ, ಬಾಶುಮಿಯ್ಯ, ಪಿಡಿಒ ಭಾಗ್ಯಜ್ಯೋತಿ, ಜಿಲ್ಲಾ ಸಶಸ್ತç ಮೀಸಲು ಪಡೆ, ಕಂದಾಯ ಅಧಿಕಾರಿಗಳು, ಪೊಲೀಸರು ಇದ್ದರು.