ಜಿಲ್ಲೆ

ಮನೋಸ್ಥೈರ್ಯ ಹೆಚ್ಚಿಸಲು ಪಠ್ಯೇತರ ಚಟುವಟಿಕೆ ಸಹಕಾರಿ

ಮೈಸೂರು: ಮನಸ್ಸಿಗೆ ಆಹ್ಲಾದವನ್ನು ನೀಡಿ ಕೆಲಸದಲ್ಲಿ ಪಕ್ವತೆ ಪಡೆಯಲು ಯಾವುದಾದರೊಂದು ಕಲೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮೈಸೂರು ಆಕಾಶವಾಣಿಯ ‘ಎ’ ದರ್ಜೆ ಕಲಾವಿದೆ, ತರಂಗ ಮ್ಯೂಸಿಕ್ ಅಕಾಡೆಮಿ ನಿರ್ದೇಶಕಿ ಸ್ಮಿತಾ ಶ್ರೀಕಿರಣ್ ಹೇಳಿದರು.

ನಗರದ ವಿಜಯವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ನಗರಮಟ್ಟದ ಅಂತರಕಾಲೇಜು ರಸಪ್ರಶ್ನೆ ಮತ್ತು ಭಾವಗೀತೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಂಗೀತ, ಸಾಹಿತ್ಯ, ನೃತ್ಯಗಳಂತಹ ಕಲೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಸಂಗೀತ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಅಡಗಿರುವ ಪ್ರತಿಭೆ ಜಾಗೃತವಾಗುತ್ತದೆ. ಜೀವನದಲ್ಲಿ ಬರುವ ಸಮಸ್ಯೆಗಳ ನಿವಾರಣೆಗೆ ಮನೋಸ್ಥೈರ್ಯ ಹೆಚ್ಚಿಸಲು ಸಹಪಠ್ಯ ಚಟುವಟಿಕೆಗಳು ಸಹಕಾರಿಯಾಗಿವೆ. ಸಹಪಠ್ಯ ಚಟುವಟಿಕೆಯಿಂದ ಸಮತೋಲನದ ಮನಸ್ಥಿತಿ ಪಡೆಯಲು ಸಾಧ್ಯ ಎಂದರು.

ವಿಜಯ ವಿಠಲ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಆರ್.ವಾಸುದೇವ ಭಟ್ ಮಾತನಾಡಿ, ಆತ್ಮ ತೃಪ್ತಿಗಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅಭ್ಯಾಸ ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಸದಭಿರುಚಿಯ ಹವ್ಯಾಸಗಳು ಇದ್ದಾಗ ಆರೋಗ್ಯವಂತಹ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.

ಪ್ರಾಂಶುಪಾಲ ಎಚ್.ಸತ್ಯಪ್ರಸಾದ್ ಮಾಡನಾಡಿ, ಸಂಗೀತ, ನೃತ್ಯ, ನಾಟಕದಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಸದಾವಕಾಶಗಳು ಸಿಕ್ಕಾಗ ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಹಂಬಲ ಪ್ರತಿಯೊಬ್ಬರಲ್ಲೂ ಇರಬೇಕು. ಕಲಿಕೆಗಾಗಿ ಸ್ಪರ್ಧೆಯಲ್ಲಿ ಭಾಗವಹಿಸುವುದು ಒಳ್ಳೆಯದು. ಸಾಹಿತ್ಯ, ಸಂಗೀತ, ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆಯ ಕ್ಷೇತ್ರಕ್ಕೆ ಪೂರಕವಾಗಿರುತ್ತದೆ. ವಿದ್ಯಾರ್ಥಿಗಳು ಕ್ರಿಯಾಶೀಲರಾಗಿರುವುದರಿಂದ ಸಾಧನೆಯ ಶಿಖರ ಏರಬಹುದು ಎಂದು ಸಲಹೆ ನೀಡಿದರು.

ಪ್ರಾಂಶುಪಾಲೆ ಬಿ.ಆರ್.ಮಂಗಳಾ, ಉಪನ್ಯಾಸಕರಾದ ಕೆ.ಎನ್.ಪ್ರದೀಪ್, ಕೆ.ವಿ.ಸಂಜಯ್ ಇತರರಿದ್ದರು.

ಸ್ಪರ್ಧೆ ವಿಜೇತರು
ಭಾವಗೀತೆ: ಮಹಾಜನ ಪಿಯು ಕಾಲೇಜಿನ ಜೆ.ಪೂರ್ವಿ ಪ್ರಥಮ, ಮಹರ್ಷಿ ಕಾಲೇಜಿನ ರುಚಿತಾ ರಾಜೇಶ್ ದ್ವಿತೀಯ, ಜ್ಞಾನೋದಯ ಕಾಲೇಜಿನ ಶ್ರಾವಣಿ ತೃತೀಯ, ಜ್ಞಾನಗಂಗಾ ಕಾಲೇಜಿನ ಜಿ.ಖುಷಿ ಸಮಾಧಾನಕರ, ಮಹಾಜನ ಕಾಲೇಜಿನ ತಂಡಕ್ಕೆ ಪರ್ಯಾಯ ಪರಿತೋಷಕ.

ರಸಪ್ರಶ್ನೆ: ವಿಜಯ ವಿಠಲ ಕಾಲೇಜಿನ ಪವನ್ ಪಿ.ರೇವಂಕರ್-ಕ್ರಿಶ್ ಗಾರ್ಲ ಪ್ರಥಮ, ಜ್ಞಾನೋದಯ ಕಾಲೇಜಿನ ಪ್ರಥಮ ಆದಿತ್ಯ ಮೋಹನ್-ಬಿ.ಸಮರ್ಥ್ ದ್ವಿತೀಯ, ಮಹಾಜನ ಕಾಲೇಜಿನ ಜೆ.ಪೂರ್ವಿ-ನಿಹಾರಿಕಾ ಹೆಗಡೆ ತೃತೀಯ, ವಿದ್ಯಾವರ್ಧಕ ಕಾಲೇಜಿನ ಜೆ.ಶ್ರೇಯಾ-ಆಸ್ತಾ ಕಾಳಪ್ಪ ಸಮಾಧಾನಕರ ಬಹುಮಾನ, ಪರ್ಯಾಯ ಪರಿತೋಷಕ ಜ್ಞಾನೋದಯ ಕಾಲೇಜಿಗೆ ದೊರೆಯಿತು.