ಕಮಲನಗರ: ದೇವರು ಗುಡಿಗಳಲ್ಲಿ ಇಲ್ಲ, ನಮ್ಮ ಆತ್ಮದಲ್ಲಿದ್ದಾನೆ. ದೇವರನ್ನು ಕಾಣಲು ನಾವು ಪೂಜಾರಿಗಳಿಗೆ ಗುಲಾಮರಾಗಬೇಕಿಲ್ಲ. ಗುಡಿ ಗುಂಡಾರಗಳಿಗೆ ಬೆನ್ನು ಹತ್ತುವ ಬದಲು, ಪ್ರತಿಯೊಬ್ಬರೂ ಮನೆಯಲ್ಲೇ ಇಷ್ಟಲಿಂಗ ಪೂಜೆ ಮಾಡಿಕೊಳ್ಳಬೇಕು. ಮನೋಸ್ಥೆರ್ಯ ವೃದ್ಧಿಗೆ ಇಷ್ಟಲಿಂಗ ಪೂಜೆ ಅಗತ್ಯ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಶ್ರಾವಣ ಮಾಸದ ನಿಮಿತ್ತ ಪಟ್ಟಣದ ಡಾ.ಚನ್ನಬಸವ ಪಟ್ಟದ್ದೇವರ ಸ್ಮಾರಕ ಭವನದಲ್ಲಿ ಮಂಗಳವಾರ ಭಕ್ತರಿಗೆ ಇಷ್ಟಲಿಂಗ ದೀಕ್ಷೆ ನೀಡಿ, ನಮ್ಮೊಳಗಿನ ಮಹಾ ಮನಸ್ಸು ಗಟ್ಟಿಗೊಳಿಸಲು ಇಷ್ಟಲಿಂಗ ನೆರವಾಗಲಿದೆ. ಲಿಂಗದ ಮೂಲಕ ಮನಸ್ಸು ನಿಯಂತ್ರಿಸಿ ಆತ್ಮಬಲ ಹೆಚ್ಚಿಸಿಕೊಂಡಾಗ ಸಹಜವಾಗಿ ಶರೀರ ಹಾಗೂ ಭಾವ ಶುದ್ಧಿ ಆಗುತ್ತದೆ. ಇದರಿಂದ ಸಂಸ್ಕಾರವAತ ಸಮಾಜ ಕಟ್ಟಲು ಸಾಧ್ಯ ಎಂದರು.
ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನಮ್ಮ ಸಮಾಜದ ಯುವಕರು ಬೇರೆ ಪರಂಪರೆಗಳ ಆಚರಿಸುತ್ತ ಮೂಲ ಲಿಂಗಾಯತ ಧಾರ್ಮಿಕ ಸಿದ್ಧಾಂತ ಮರೆಯುತ್ತಿದ್ದಾರೆ. ಸಂಸ್ಕೃತಿ, ಸಂಸ್ಕಾರದಿಂದ ದೂರ ಉಳಿದ ಯುವ ಸಮೂಹದಿಂದ ಸದೃಢ ಸಮಾಜ ಕಟ್ಟಲಾಗದು. ಮನೋವಿಕಾಸ, ಆತ್ಮಬಲದಿಂದ ಮಾತ್ರ ಅಸಾಧ್ಯವಾದದ್ದು ಸಾಧಿಸಲು ಸಾಧ್ಯ. ನಮ್ಮೊಳಗಿರುವ ಮಹಾ ಮನಸ್ಸು ಗಟ್ಟಿಗೊಳಿಸಿಕೊಳ್ಳಲು ಇಷ್ಟಲಿಂಗ ನೆರವಾಗುತ್ತದೆ ಎಂದರು.
ಯುವತಿಯರು, ಮಹಿಳೆಯರು, ಮಕ್ಕಳು ಸೇರಿ ಸುಮಾರು ೧೫೦ಕ್ಕೂ ಹೆಚ್ಚು ಜನ ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಿಂಗಧಾರಣೆಯ ವಿಧಿ ವಿಧಾನಗಳನ್ನು ತಿಳಿದುಕೊಂಡರು.
ಮುಖಂಡ ಪ್ರಕಾಶ ಟೊಣ್ಣೆ, ಅವಿನಾಶ ಶಿವಣಕರ, ಶಿವಶರಣಪ್ಪ ಚಿಕಮುರ್ಗೆ, ಅಮರ ಶಿವಣಕರ, ಹಾವಗಿ ಟೊಣ್ಣೆ, ಶಾಮರಾವ ಬಿರಾದಾರ, ಅಜಿತ್ ರಾಗಾ, ಪ್ರಭುರಾವ ಕಳಸೆ, ರಮೇಶ ಬಿರಾದಾರ, ಸೂರ್ಯಕಾಂತ ಮಹಾಜನ, ರವಿ ಕಾರಬಾರಿ, ಪ್ರಕಾಶ ಸೊಲ್ಲಾಪುರೆ, ಸುರೇಶ ಸೊಲ್ಲಾಪುರೆ, ಜೀತೇಂದ್ರ ಮಹಾಜನ, ರಾಮೇಶ್ವರ ಶಿವಣಕರ ಇತರರಿದ್ದರು. ಪ್ರಭುರಾವ ಬಿರಾದಾರ ಸ್ವಾಗತಿಸಿದರು. ಮಡಿವಾಳಪ್ಪ ಮಹಾಜನ ನಿರೂಪಣೆ ಮಾಡಿದರು.