ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಆ. 5ರಂದು ಭವ್ಯ ಶ್ರೀರಾಮ ಮಂದಿರ ನಿರ್ವಣಕ್ಕೆ ಭೂಮಿಪೂಜೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಬೆಳಗ್ಗೆ 10.30ಕ್ಕೆ ತಮ್ಮ ಮನೆಗಳಲ್ಲಿ ಶ್ರೀ ರಾಮನ ಅಥವಾ ಇಷ್ಟದೇವರ ಪೂಜೆ ಹಾಗೂ ಭಜನೆ ಮಾಡುವಂತೆ ವಿಶ್ವ ಹಿಂದು ಪರಿಷತ್ ಕರೆ ನೀಡಿದೆ.
ಭೂಮಿಪೂಜೆ ನಂತರ ಶಂಖ, ಜಾಗಟೆ ಬಾರಿಸಿ, ಸಿಹಿ ಹಂಚುವಂತೆ ಹಾಗೂ ಸಂಜೆ ದೀಪೋತ್ಸವ ಆಚರಿಸುವಂತೆ ವಿಹಿಂಪ ಸೂಚಿಸಿದೆ. ಭೂಮಿಪೂಜೆ ಹಿನ್ನೆಲೆಯಲ್ಲಿ ನಗರದ ಕಮರಿಪೇಟೆಯ ಶ್ರೀ ರಾಮ ಮಂದಿರದಲ್ಲಿ ಕೋವಿಡ್ 19 ನಿಯಮಗಳನ್ನು ಪಾಲಿಸಿ, ವಿಶೇಷ ಪೂಜೆ ನಡೆಯಲಿದೆ.
ಬೆಳಗ್ಗೆ 11 ಗಂಟೆಗೆ ದಾಜಿಬಾನಪೇಟೆಯ ಶ್ರೀ ಸಹಸ್ರಾರ್ಜುನ ವೃತ್ತದಲ್ಲಿ ಎಸ್ಎಸ್ಕೆ ಸಮಾಜ ಚಿಂತನ ಮಂಥನ ಸಮಿತಿಯಿಂದ ಶ್ರೀರಾಮನ ತೈಲಚಿತ್ರಕ್ಕೆ ಪೂಜೆ ಹಮ್ಮಿಕೊಳ್ಳಲಾಗಿದೆ.
ಕೇಶವಕುಂಜ: ನಗರದ ಗೋಕುಲ ರಸ್ತೆಯಲ್ಲಿರುವ ಕೇಶವ ಕುಂಜದಲ್ಲಿಯೂ ಶ್ರೀ ರಾಮನಿಗೆ ವಿಶೇಷ ಪೂಜೆ ಆಯೋಜಿಸಲಾಗಿದೆ. ಬೆಳಗ್ಗೆಯಿಂದ ಶ್ರೀ ರಾಮನ ಭಜನೆ, ಪೂಜೆ ಮತ್ತು ಸಂಜೆ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸು. ರಾಮಣ್ಣ, ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖರಾದ ಮಂಗೇಶ ಭೇಂಡೆ, ಇತರ ಪ್ರಚಾರಕರು ಹಾಗೂ ಅವಳಿ ನಗರದ ಸಂಘದ ಕಾರ್ಯಕರ್ತರು ಪಾಲ್ಗೊಳ್ಳುವರು.
ಈ ಹಿನ್ನೆಲೆಯಲ್ಲಿ ಮಂಗಳವಾರವೇ ಕೇಶವ ಕುಂಜ ಕಟ್ಟಡವನ್ನು ವಿದ್ಯುತ್ದೀಪಗಳಿಂದ ಅಲಂಕರಿಸಲಾಗಿದೆ. ಕಟ್ಟಡದ ಒಳಗೆ ಶ್ರೀರಾಮ ಮಂದಿರ, ಶ್ರೀರಾಮ, ಲಕ್ಷ್ಮಣ, ಸೀತೆ, ಹನುಮಂತ ದೇವರ ರಂಗೋಲಿ ಬಿಡಿಸಲಾಗಿದೆ.
ಮಂದಿರದ ಮಾದರಿ : ಶ್ರೀ ರಾಮ ಮಂದಿರದ ಅಡಿಗಲ್ಲು ಸಮಾರಂಭದ ಹಿನ್ನೆಲೆಯಲ್ಲಿ ಬಿಜೆಪಿಯ ಮಂಜುನಾಥ ಹೆಬಸೂರ ಗೆಳೆಯರ ಬಳಗ ಮಂದಿರದ ಮಾದರಿ ತಯಾರಿಸಿದ್ದಾರೆ.
ಮೂರುಸಾವಿರ ಮಠದ ಆವರಣದಲ್ಲಿ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಂದಿರದ ಮಾದರಿಗೆ ಪೂಜೆ ನೆರವೇರಿಸಿ, ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದರು. ಶಂಕರಗೌಡ, ಸಂತೋಷ, ಸುಧೀರ, ಕಾರ್ತಿಕ, ಗುರು ಹಿರೇಮಠ ಇತರರಿದ್ದರು.