ಬೆಳಗಾವಿ ನಗರದಲ್ಲಿ ಭಾನುವಾರ ಬೆಳಗ್ಗೆ ಅಗತ್ಯವಸ್ತುಗಳ ಖರೀದಿಗಾಗಿ ನೂರಾರು ಜನರು ಮಾರುಕಟ್ಟೆಗೆ ಆಗಮಿಸಿದ್ದರಿಂದ ದಟ್ಟಣೆ ಉಂಟಾಗಿತ್ತು. 
ಜಿಲ್ಲೆ

ಮನೆಯೇ ಮಂತ್ರಾಲಯವೆಂದ ಜನ

ಮನೆಯೇ, ಮಂತ್ರಾಲಯವೆಂದ, ಜನ, ಗಡಿಜಿಲ್ಲೆಯಲ್ಲಿ, ಮೊದಲ, ವೀಕೆಂಡ್, ಲಾಕ್‌ಡೌನ್, ಯಶಸ್ವಿ, ಪೊಲೀಸರಿಂದ, ಬಿಗಿ, ಭದ್ರತೆ, ವಾಹನ, ಸಂಚಾರವಿಲ್ಲದೆ, ರಸ್ತೆಗಳು, ಭಣಭಣ, ಬೆಳಗಾವಿ, Home, Ministry, Jana, Frontier, First, Weekend, Lockdown, Successful, Police, Tight, Security, Vehicle, Traffic, Roads, Bend, Belagavi

ಬೆಳಗಾವಿ: ಕೋವಿಡ್ ನಿಯಂತ್ರಣಕ್ಕಾಗಿ ಘೋಷಿಸಲಾದ ವಾರಾಂತ್ಯದ ಲಾಕ್‌ಡೌನ್‌ಗೆ ಗಡಿಜಿಲ್ಲೆಯ ನಾಗರಿಕರಿಂದ ಭಾನುವಾರವೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮೊದಲ ‘ವೀಕೆಂಡ್ಲಾ ಕ್‌ಡೌನ್’ ಯಶ ಕಂಡಿತು.

ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದು, ದಿನಸಿ ಅಂಗಡಿಗಳ ಮಾಲೀಕರು ಬೆಳಗ್ಗೆ 10ರ ನಂತರ ಸ್ವಯಂಪ್ರೇರಿತರಾಗಿ ಬಾಗಿಲು ಬಂದ್ ಮಾಡಿದರು. ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಪೊಲೀಸರು ಸಂಚರಿಸಿ, ವ್ಯಾಪಾರಸ್ಥರನ್ನು ಹಾಗೂ ಗ್ರಾಹಕರನ್ನು ಮನೆಗೆ ತೆರಳುವಂತೆ ಸೂಚಿಸಿದರು.

ಎಲ್ಲವೂ ಬಂದ್: ನಗರದ ರಾಯಣ್ಣ ವೃತ್ತ, ಕೊಲ್ಲಾಪುರ ವೃತ್ತ, ಚನ್ನಮ್ಮ ವೃತ್ತ, ಸಂಭಾಜಿ ವೃತ್ತ, ಗೋವಾವೇಸ್, ಬೋಗಾರವೇಸ್, ಅಂಬೇಡ್ಕರ್ ರಸ್ತೆ, ಖಡೇಬಜಾರ್ ಹಾಗೂ ಶಹಾಪುರ ಮಾರುಕಟ್ಟೆ ಪ್ರದೇಶ ಸೇರಿದಂತೆ ಬಹುತೇಕ ವೃತ್ತಗಳು ಹಾಗೂ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪ್ರಮುಖ ರಸ್ತೆಗಳಲ್ಲಿ ಯಾವುದೇ ವಾಹನ ಸಂಚರಿಸದಂತೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರು. ಎಟಿಎಂಗಳು, ಔಷಧ ಅಂಗಡಿಗಳ ಹೊರತುಪಡಿಸಿ ಬಹುತೇಕ ಎಲ್ಲ ಅಂಗಡಿಗಳು ಮುಚ್ಚಿದ್ದವು. ಅಲ್ಲಲ್ಲಿ ಕೆಲವು ಹೋಟೆಲ್‌ಗಳು ತೆರೆದುಕೊಂಡು, ಪಾರ್ಸಲ್ ಸೇವೆಯನ್ನಷ್ಟೇ ಒದಗಿಸಿದವು.

ದಂಡದ ಬಿಸಿ: ಲಾಕ್‌ಡೌನ್ ಮಧ್ಯೆಯೂ ಅನಗತ್ಯವಾಗಿ ಮನೆಯಿಂದ ರಸ್ತೆಗೆ ಬಂದವರನ್ನು ತಡೆದ ಪೊಲೀಸರು, ಅವರಿಗೆ ದಂಡ ವಿಧಿಸಿದರು. ಮಾಸ್ಕ್ ಧರಿಸದೆ ಬಂದವರಿಗೂ ಎಚ್ಚರಿಸುತ್ತಿದ್ದುದು ಕಂಡು ಬಂತು. ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಿದರೂ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಇದ್ದರು. ಬಸ್ ನಿಲ್ದಾಣದಲ್ಲಿ ಚಾಲಕರು ಪ್ರಯಾಣಿಕರಿಗಾಗಿ ಕಾದು ಕುಳಿತಿದ್ದರು. ನಿಲ್ದಾಣಕ್ಕೆ ಬಂದಿದ್ದ ಬೆರಳೆಣಿಕೆಯಷ್ಟು ಪ್ರಯಾಣಿಕರನ್ನು ಆಯಾ ಮಾರ್ಗಕ್ಕೆ ಒಯ್ದರು. ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದವು.

ಊಟಕ್ಕಾಗಿ ಓಡಾಟ: ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದುಕೊಂಡು ಬಂದಿದ್ದ ಕುಟುಂಬದ ಸದಸ್ಯರು ಊಟಕ್ಕಾಗಿ ಪರದಾಡಿದರು. ವಿವಿಧ ಆಸ್ಪತ್ರೆಗಳಿಗೆ ಒಳರೋಗಿಗಳನ್ನಾಗಿ ಸೇರಿಸಿದ ಸಹಾಯಕರು ನಿತ್ಯ ಹೊರಗಡೆ ಊಟ ಮಾಡುತ್ತಿದ್ದರು. ಆದರೆ, ಭಾನುವಾರ ಎಲ್ಲ ಹೋಟೆಲ್‌ಗಳು ಬಂದ್ ಇದ್ದುದರಿಂದ ಊಟಕ್ಕಾಗಿ ಅಲೆದಾಡಿದರು. ಅಂತಹವರಿಗೆ ಪೊಲೀಸರು ಪಾರ್ಸಲ್ ಸೇವೆ ಒದಗಿಸುತ್ತಿರುವ ಹೋಟೆಲ್‌ಗಳ ಮಾಹಿತಿ ನೀಡಿ ಕಳುಹಿಸಿದರು.

ತರಕಾರಿ ಖರೀದಿಗೆ ನೂಕುನುಗ್ಗಲು

ಬೆಳಗ್ಗೆ 6ರಿಂದ 10ರ ವರೆಗೆ ಅಗತ್ಯ ವಸ್ತುಗಳಾದ ತರಕಾರಿ, ಹಾಲು, ದಿನಸಿ ಅಂಗಡಿ, ಬೇಕರಿ ಸೇರಿದಂತೆ ಕಿರಾಣಿ ಅಂಗಡಿ ತೆರೆದಿದ್ದವು. ಶನಿವಾರ ಹೆಚ್ಚಿನ ಮಂದಿ ದಿನಸಿ ಖರೀದಿಸಿದ್ದರಿಂದ ಅಷ್ಟೇನೂ ನೂಕು ನುಗ್ಗಲು ಕಂಡು ಬರಲಿಲ್ಲ. ಆದರೆ, ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದು ಕಂಡು ಬಂತು. ಚಿಕನ್ ಹಾಗೂ ಎಗ್ ಸೆಂಟರ್‌ಗಳಲ್ಲಿ ಜನರು ಸರತಿಯಲ್ಲಿ ನಿಂತು ಖರೀದಿಸುತ್ತಿದ್ದರು. ಗ್ರಾಹಕರು ಅಗತ್ಯ ವಸ್ತುಗಳನ್ನು ಖರಿದಿಸಿ 10 ಗಂಟೆಯಾಗುತ್ತಿದ್ದಂತೆ ಮನೆ ಸೇರಿದರು. ತರಕಾರಿ ವ್ಯಾಪಾರಿಗಳು ಆದಷ್ಟೇ ವ್ಯಾಪಾರಕ್ಕೆ ತೃಪ್ತಿ ಪಟ್ಟು ಮಾರುಕಟ್ಟೆಯಿಂದ ಹೊರಟರು.

ಕಳ್ಳದಾರಿಗಳಿಗೆ ಖಾಕಿ ಕಣ್ಗಾವಲು

ಮಹಾರಾಷ್ಟ್ರದಿಂದ ಕಳ್ಳದಾರಿಗಳ ಮೂಲಕ ರಾಜ್ಯವನ್ನು ಪ್ರವೇಶಿಸುತ್ತಿದ್ದಾರೆ ಎಂಬ ಮಾಹಿತಿಯಿಂದ ಆತಂಕ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಸಂಪರ್ಕಿಸುವ ಬಾಚಿ ಚೆಕ್‌ಪೋಸ್ಟ್‌ಗೆ ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಯಶೋದಾ ವಂಟಗೋಡಿ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಗಡಿಭಾಗದಲ್ಲಿನ ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕಳ್ಳದಾರಿಗಳನ್ನು ಬಂದ್ ಮಾಡುವ ಬಗ್ಗೆ ಸಿಬ್ಬಂದಿ ನಿಯೋಜಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.