ಜಿಲ್ಲೆ

ಮನೆಯಿಂದಲೇ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ

ಕೋಲಾರ: ಕೆಮ್ಮು, ನೆಗಡಿ, ಜ್ವರ ಮತ್ತಿತರ ಸಾಮಾನ್ಯ ಸಮಸ್ಯೆಗಳಿಗೆ ಮನೆಯಲ್ಲೇ ಕುಳಿತು ವೈದ್ಯರಿಂದ ಚಿಕಿತ್ಸೆ ಪಡೆಯಲು ಇ-ಸಂಜೀವಿನಿ ಒಪಿಡಿ ಆರಂಭಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎನ್.ವಿಜಯಕುಮಾರ್ ಹೇಳಿದರು.

ಡಿಎಚ್‌ಒ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕರೊನಾದಿಂದಾಗಿ ತುರ್ತು ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗಳಿಗೆ ಭೇಟಿ ನೀಡುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸೇವೆ ಒದಗಿಸಲು ಕೇಂದ್ರ ಸರ್ಕಾರ ಇ-ಸಂಜೀವಿನಿ ಒಪಿಡಿ ಕಾರ್ಯರೂಪಕ್ಕೆ ತಂದಿದೆ ಎಂದರು.

ವಿಡಿಯೋ ಮೂಲಕ ಸಂಪರ್ಕ: ಕೇಂದ್ರದ ಆರೋಗ್ಯ ಸಚಿವಾಲಯ ರಾಷ್ಟ್ರೀಯ ಟೆಲಿ ಸಮಾಲೋಚನಾ ಸೇವೆ ಆ್ಯಪ್ ಸಿದ್ಧಪಡಿಸಿದ್ದು. ಮೊಬೈಲ್ ಪ್ಲೇ ಸ್ಟೋರ್ ಅಥವಾ ಗೂಗಲ್‌ನಲ್ಲಿ ಇ-ಸಂಜೀವಿನಿ ಒಪಿಡಿ ಎಂದು ನಮೂದಿಸಿದರೆ ಮುಖಪುಟ ತೆರೆದುಕೊಳ್ಳುತ್ತದೆ. ರೋಗಿಯ ರಿಜಿಸ್ಟ್ರೇಷನ್‌ನಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿದರೆ ಒಪಿಡಿ ಸಂಖ್ಯೆ (ಟೋಕನ್) ಬರುತ್ತದೆ. ಇದನ್ನು ನಮೂದಿಸಿದರೆ ರಿಜಿಷ್ಟ್ರೇಷನ್ ಅಪ್ಲಿಕೇಷನ್ ತೆರೆದುಕೊಳ್ಳುತ್ತದೆ. ಇದರಲ್ಲಿ ರೋಗಿ ಹೆಸರು, ಲಿಂಗ, ವಯಸ್ಸು, ವಿಳಾಸ ನಮೂದಿಸಿದರೆ ಟೋಕನ್ ನಂಬರ್ ದೊರೆಯುತ್ತದೆ. ಟೋಕನ್ ನಂಬರ್ ನೀಡಿ ವೈದ್ಯರನ್ನು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿದರೆ ಕಾಯಿಲೆ ಕುರಿತು ವಿಚಾರಣೆ ನಡೆಸಿ ಸೂಕ್ತ ಚಿಕಿತ್ಸೆ ಬರೆದುಕೊಡುತ್ತಾರೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ 190 ಆರೋಗ್ಯ ಉಪ ಕೇಂದ್ರಗಳಿದ್ದು, ಎಲ್ಲ ಕೇಂದ್ರಗಳ ಒಪಿಡಿಗಳಿಗೆ ಬಿಎಸ್ಸಿ ನರ್ಸಿಂಗ್ ಮುಗಿಸಿರುವ ಮಧ್ಯಮ ಹಂತದ ಆರೋಗ್ಯ ಸೇವಾಕರ್ತರನ್ನು ಸರ್ಕಾರ ನಿಯೋಜಿಸಿದೆ. ಈ ಆರೋಗ್ಯ ಸೇವಾಕರ್ತರು ಕರೊನಾ ನಿರ್ವಹಣೆಯಲ್ಲಿ ತರಬೇತಿ ಪಡೆದಿರುವುದರಿಂದ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಗೆ ಹೆಚ್ಚು ಅನುಕೂಲ ಆಗಲಿದೆ ಎಂದರು.

ಇ-ಸಂಜೀವಿನಿ ಒಪಿಡಿ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಸಿ.ವಿ. ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳ 48 ತಜ್ಞ ವೈದ್ಯರು ಒಪಿಡಿಗೆ ನೋಂದಣಿ ಮಾಡಿಸಿಕೊಂಡಿದ್ದು, ಬೆಳಗ್ಗೆ 9ರಿಂದ ಸಂಜೆ 4.30ರವರೆಗೆ ಕಾರ್ಯನಿರ್ವಹಿಸುತ್ತಾರೆ. ವೈದ್ಯರು ಸೂಚಿಸುವ ಔಷಧವನ್ನು ಹತ್ತಿರದ ಆರೋಗ್ಯ ಕೇಂದ್ರ ಇಲ್ಲವೇ ಹೊರಗಡೆಯಿಂದ ತರಿಸಿಕೊಳ್ಳಬಹುದು ಎಂದರು.

ಜಂತುಹುಳು ಮಾತ್ರೆ ವಿತರಣೆ: ಜಿಲ್ಲೆಯಲ್ಲಿ 1ರಿಂದ 19 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಜಂತುಹುಳು ಮಾತ್ರೆಯನ್ನು ಸೆ.7ರಿಂದ 21ರ ಅವಧಿಯಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ವಿತರಿಸಲಿದ್ದಾರೆ. ದೇಶಾದ್ಯಂತ ಪ್ರತಿವರ್ಷ ಫೆಬ್ರವರಿ 10, ಆಗಸ್ಟ್ 10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಆಚರಿಸಲಾಗುತ್ತದೆ. ಳೆದ ಫೆಬ್ರರಿಯಲ್ಲಿ 3,40,143 ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆ ನೀಡಲಾಗಿತ್ತು. ಈ ವರ್ಷ 3,27,061 ಮಕ್ಕಳಿಗೆ ಮಾತ್ರೆ ನೀಡಲಾಗುತ್ತದೆ ಎಂದು ಡಿಎಚ್‌ಒ ಡಾ.ಎಸ್.ಎನ್.ವಿಜಯಕುಮಾರ್ ಹೇಳಿದರು.