ಹಾಸನ: ಮನೆಯ ಬಾಲ್ಕನಿಗೆ ಹಾಕಿದ್ದ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು ಮನೆಯಲ್ಲಿದ್ದ ನಗದು ಹಾಗೂ ಚಿನ್ನ-ಬೆಳ್ಳಿಯ ಆಭರಣಗಳ ಕಳವು ಮಾಡಿರುವ ಘಟನೆ ನಗರದ ಸತ್ಯ ಮಂಗಲದ ಕೆಹೆಚ್‌ಬಿ ಬಡಾವಣೆಯಲ್ಲಿ ನಡೆದಿದೆ.
ಬಡಾವಣೆ ನಿವಾಸಿ ಶರತ್‌ಬಾಬು ಎಂಬುವರು ತಮ್ಮ ಸಹೋದರ ರಕ್ಷಿತ್ ಎಂಬುವವರ ವಿವಾಹ ನಿಶ್ಚಯವಾಗಿದ್ದರಿಂದ ಆಮಂತ್ರಣ ಪತ್ರಿಕೆ ಪೂಜೆ ಮಾಡಿಸಿಕೊಂಡು ಬರುವುದಕ್ಕಾಗಿ ಮಾ.23 ರಂದು ಸಂಜೆ ಕೆ.ಆರ್.ಪೇಟೆ ತಾಲೂಕಿನ ಗೋವಿಂದನಹಳ್ಳಿಗೆ ಹೋಗಿ ಪೂಜೆ ಮುಗಿಸಿ, ಅಲ್ಲಿಯೇ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು.
ಮಾ.24ರ ಬೆಳಿಗ್ಗೆ 9.30 ಗಂಟೆ ಸುಮಾರಿಗೆ ಪಕ್ಕದ ನಿವಾಸಿ ಫೋನ್ ಮಾಡಿ ನಿಮ್ಮ ಮನೆಯ ಗೇಟ್ ಬೀಗ ಹಾಕಿದ್ದು, ಮೇಲ್ಭಾಗದ (ಬಾಲ್ಕನಿ) ಬಾಗಿಲು ತೆರೆದಿದೆ ಎಂದು ಹೇಳಿದರು. ಸುದ್ದಿ ತಿಳಿದು ಕೂಡಲೇ ಕೆ.ಆರ್.ಪೇಟೆಯಿಂದ ಹೊರಟು ಮಧ್ಯಾಹ್ನ 12.30 ರ ಸುಮಾರಿಗೆ ಮನೆಗೆ ಬಂದರು.
ಮನೆಯ ಬಾಲ್ಕಿನಿಯಲ್ಲಿರುವ ಬಾಗಿಲಿಗೆ ಹಾಕಿದ್ದ ಚಿಲಕ ಮೀಟಿದ ಬಾಗಿಲಿಂದ ಒಳಬಂದು ಶರತ್‌ಬಾಬು ನಾವು ಮಲಗುವ ಕೋಣೆಯ ವಾಲ್ಡ್ರೂ ಬ್‌ನಲ್ಲಿಟ್ಟಿದ್ದ ತಲಾ 15 ಗ್ರಾಂ ತೂಕದ ನಾಲ್ಕು ಚಿನ್ನದ ಬಳೆಗಳು, 60 ಗ್ರಾಂ ತೂಕದ, 20 ಗ್ರಾಂ ತೂಕದ ಚಿನ್ನದ ಬ್ರಾಸ್ ಲೇಟ್, 60 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 15 ಗ್ರಾಂ ತೂಕದ ಚಿನ್ನದ ನೆಕ್ಲೇಸ್, 40 ಗ್ರಾಂ ತೂಕದ ಲಾಂಗ್ ಚೈನ್, 10 ಗ್ರಾಂ.ತೂಕದ ಒಂದು ಜೊತೆ ಚಿನ್ನದ ಓಲೆ (ಆಂಟಿಕ್ ಪೀಸ್), 8 ಗ್ರಾಂ ತೂಕದ ಮುತ್ತಿನ ಓಲೆ ಜುಮುಕಿ, ಮಕ್ಕಳ ತಲಾ 7 ಗ್ರಾಂ ತೂಕದ ಎರಡು ಚಿನ್ನದ ಸರಗಳು, 14 ಗ್ರಾಂ, 10 ಗ್ರಾಂ ತೂಕದ ಮಕ್ಕಳ 2 ಬ್ರಾಸ್ ಲೇಟ್, 20 ಗ್ರಾಂ ತೂಕದ್ದು, 8 ಗ್ರಾಂ ತೂಕದ ಚಿನ್ನದ ನವರತ್ನ ಉಂಗುರ, ಗಣೇಶನ ವಿಗ್ರಹವಿರುವ 6 ಗ್ರಾಂ ತೂಕದ ಚಿನ್ನದ ಉಂಗುರ, 8 ಗ್ರಾಂ ತೂಕದ ಮಕ್ಕಳ ನಾಲ್ಕು ಉಂಗುರ ದೋಚಿ ಪರಾರಿಯಾಗಿದ್ದಾರೆ.
ಅಲ್ಲದೆ 9.15 ಲಕ್ಷ ನಗದು, ಒಂದು ಬೆಳ್ಳಿಯ ಚೊಂಬು, ಎರಡು ಕಾಮಾಕ್ಷಿ ದೀಪ, ಮಕ್ಕಳ ಮತ್ತು ಮನೆಯವರ 3 ಜೊತೆ ಕಾಲಿನ ಚೈನು ಸೇರಿ 400 ಗ್ರಾಂ ತೂಕದ 30 ಸಾವಿರ ಮೌಲ್ಯದ ಬೆಳ್ಳಿ ಆಭರಣ ಹಾಗೂ ಒಟ್ಟು 11.52 ಲಕ್ಷ ರೂ. ಬೆಲೆಯ 279 ಗ್ರಾಂ. ತೂಕದ ಚಿನ್ನದ ಆಭರಣ ದೋಚಿದ್ದಾರೆ.
ಅಪಾರ ಮೌಲ್ಯದ ನಗ-ನಾಣ್ಯ ದೋಚಿ ಪರಾರಿಯಾಗುವಾಗ ಮನೆಯಲ್ಲಿನ ಸಿಸಿ ಕ್ಯಾಮೆರಾದ ಡಿವಿಆರ್‌ನ್ನೂ ತೆಗೆದುಕೊಂಡು ಹೋಗಿದ್ದಾರೆ.
ಈ ಸಂಬಂಧ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.