ಹಾಸನ: ಆರೋಗ್ಯ ಉತ್ತಮವಾಗಿ ಇರಬೇಕಾದರೆ ಸಾರ್ವಜನಿಕರು ಮೊದಲು ಸ್ವಚ್ಛತೆ ಕಡೆಗೆ ಹೆಚ್ಚಿನ ಆದ್ಯತೆ ನೀಡಿ, ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ನ್ಯಾಯಾಧೀಶ ಬಿ.ಕೆ. ರವಿಕಾಂತ್ ಕಿವಿಮಾತು ಹೇಳಿದರು.
ತಾಲೂಕಿನ ಕೋರವಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂಚೇಶ್ವರ ಸ್ವಾಮಿ ದೇವಸ್ಥಾನದ ಬಳಿ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛತೆ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಚ್ಛತೆಯೇ ಸೇವೆ ಆಂದೋಲನ ಸೆ.15 ರಿಂದ ಅ.2ರ ತನಕ ನಡೆಯಲಿದ್ದು, ಇದರಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ವಚ್ಛತಾ ಕಾರ್ಯ ಒಂದು ದಿನಕ್ಕೆ ಸೀಮಿತವಾಗದೆ ದಿನನಿತ್ಯ ಪ್ರತಿಯೊಬ್ಬರೂ ಸ್ವ-ಇಚ್ಛೆಯಿಂದ ಶ್ರಮದಾನ ಮಾಡುವ ಮೂಲಕ ಸ್ವಚ್ಛತೆ ಕಾಪಾಡಲು ಮುಂದಾಗಬೇಕು. ಸಾರ್ವಜನಿಕರು ನಿಮ್ಮ ಮನೆಗಳ ಮುಂದೆ, ಚರಂಡಿ ಹಾಗು ಊರಿನ ಸ್ವಚ್ಛತೆ ಕಾಪಾಡುವಲ್ಲಿ ಸ್ವತಃ ಮುಂದಾಗಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ ಮಾತನಾಡಿ, ಸ್ವಚ್ಛತೆ ಕಾಪಾಡುವುದರಿಂದ ಉತ್ತಮ ಆರೋಗ್ಯ ಲಭಿಸಿ ಜೀವಿತಾವಧಿ ಹೆಚ್ಚಾಗುತ್ತದೆ. ಸ್ವಚ್ಛತೆ ಕಾಪಾಡದಿದ್ದರೆ ಅನೈರ್ಮಲ್ಯ ಉಂಟಾಗಿ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಆದ್ದರಿಂದ ಈ ಆಂದೋಲನದ ಬಗ್ಗೆ ಮಹಿಳಾ ಸ್ವ ಸಹಾಯ ಸಂಘ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು, ಸ್ಥಳೀಯ ಮುಖಂಡರು ಎಲ್ಲರೂ ಜಾಗೃತಿ ಮೂಡಿಸುವಂತೆ ತಿಳಿಸಿದರು.
ಪ್ಲಾಸ್ಟಿಕ್ ಬಳಕೆ ನಿಷೇಧ ಹಾಗು ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿ, ಪ್ರತಿ ಮನೆ ಮನೆಯಲ್ಲೂ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜನರಿಗೆ ಅರಿವು ಮೂಡಿಸಿದರು. ಪೌಷ್ಟಿಕ ಆಹಾರ ಪದ್ಧತಿ, ಶುದ್ಧ ಗಾಳಿ ಸೇವನೆ, ಜೀವನ ಶೈಲಿಯ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.
ಇದೇ ವೇಳೆ ಸ್ವಚ್ಛತೆ ಕಾಪಾಡುವಿಕೆ ಹಾಗು ಪ್ಲಾಸ್ಟಿಕ್ ಬಳಕೆ ನಿರ್ಮೂಲನೆ ಮಾಡುವ ಬಗ್ಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿಲಾಯಿತು. ನಂತರ ಸ್ವಚ್ಛತಾ ಕಾರ್ಯದಲ್ಲಿ ನ್ಯಾಯಾಧೀಶರು, ಜಿ.ಪಂ, ತಾ.ಪಂ. ಅಧಿಕಾರಿಗಳು ಸೇರಿ ಶ್ರಮದಾನ ಮಾಡುವ ಮೂಲಕ ಕಸ ಸಂಗ್ರಹಣೆ ಮಾಡಿದರು.
ಈ ಸಂದರ್ಭದಲ್ಲಿ ಕೋರವಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೇಶ್, ತಾಲ್ಲೂಕು ಪಂಚಾಯಿತಿ ಅಧಿಕಾರಿ ಕೆ.ಎಲ್ ಯಶವಂತ್, ಸಹಾಯಕ ನಿರ್ದೇಶಕ ಸಿ.ಬಿ.ದಿನೇಶ್, ಕೋರವಂಗಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊನ್ನಮ್ಮ, ಪಿಡಿಓ ರತನ್ ಕುಮಾರ್, ತಾಲೂಕು ಪಂಚಾಯಿತಿ ಎನ್.ಆರ್.ಎಲ್.ಎಂ ಮೇಲ್ವಿಚಾರಕ ಮುನಿಸ್ವಾಮಿ ಹಾಜರಿದ್ದರು.