ಬಸವಕಲ್ಯಾಣ ತಾಲೂಕಿನ ಪರ್ತಾಪುರದಲ್ಲಿ ನಮ್ಮ ಶೌಚಾಲಯ, ನಮ್ಮ ಗೌರವ ಆಂದೋಲನದ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಕಲಾ ತಂಡದ ನಾಟಕಕ್ಕೆ ತಾಪಂ ಇಒ ರಮೇಶ ಸುಲ್ಪಿ ತಮಟೆ ಬಾರಿಸಿ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ಶೋಭಾವತಿ ಮೇತ್ರೆ, ಉಪಾಧ್ಯಕ್ಷ ಸಂತೋಷ ಬಿರಾದಾರ, ಪಿಡಿಒ ಚಂದ್ರಾಮ ಧೂಳಖೇಡ, ಐಇಸಿ ಸಂಯೋಜಕ ವೀರಾರೆಡ್ಡಿ ಇತರರಿದ್ದರು. 
ಜಿಲ್ಲೆ

ಮನೆಗೊಂದು ಶೌಚಗೃಹ ನಾಟಕ ಪ್ರದರ್ಶನ

ಬಸವಕಲ್ಯಾಣ: ಕಾರು, ಬೈಕ್, ಸಂಪತ್ತು, ಅಂತಸ್ತು ಮುಖ್ಯವಲ್ಲ. ಶೌಚಗೃಹ ನಿರ್ಮಾಣ ಮುಖ್ಯ. ನಮ್ಮ ಮನೆಯ ತಾಯಯಿಂದರು, ಅಕ್ಕಂದಿಯರು ಹಾಗೂ ಸಹೋದರಿಯರು ಬಹಿರ್ದೆಸೆಗೆ ಹೊರಗಡೆ ಹೋಗದಂತೆ ಮನೆಯಲ್ಲಿ ಶೌಚಗೃಹ ಕಟ್ಟಿಕೊಳ್ಳುವಲ್ಲಿ ನಮ್ಮ ಸ್ವಾಭಿಮಾನ ಅಡಗಿದೆ ಎನ್ನುವುದನ್ನು ನಾಟಕ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸಲಾಯಿತು.

ವಿಶ್ವ ಶೌಚಾಲಯ ಮತ್ತು ವಿಶ್ವ ಮಾನವ ಹಕ್ಕುಗಳ ನಿಮಿತ್ತ ನಮ್ಮ ಶೌಚಾಲಯ, ನಮ್ಮ ಗೌರವ ಹಾಗೂ ಅಂದದ ಶೌಚಾಲಯ ಆನಂದದ ಜೀವನ ಎಂಬ ಅಭಿಯಾನದ ಪ್ರಯುಕ್ತ ಶನಿವಾರ ಪರ್ತಾಪುರದ ಸರ್ಕಾರಿ ಶಾಲೆಯಲ್ಲಿ ಗ್ರಾಮಕ್ಕೊಂದು ದೇವಾಲಯ-ಮನೆಗೊಂದು ಶೌಚಾಲಯ ಕುರಿತು ಕಲಾ ತಂಡದಿಂದ ನಾಟಕ ಪ್ರದರ್ಶನಗೊಂಡಿತು.

ತಮಟೆ ಬಾರಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ ಮಾತನಾಡಿ, ಶೌಚಗೃಹ ನಿರ್ಮಾಣದ ಅವಶ್ಯಕತೆ ಕುರಿತು ಕಲಾ ತಂಡದಿಂದ ಪ್ರದರ್ಶನಗೊಂಡ ನಾಟಕ ಬಹಳ ಅರ್ಥಪೂರ್ಣ ಹಾಗೂ ಪರಿಣಾಮಕಾರಿಯಾಗಿದೆ. ಇಂತಹ ನಾಟಕಗಳು ಗ್ರಾಪಂನಿಂದ ಮೇಲಿಂದ ಮೇಲೆ ನಡೆಸುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಅದಕ್ಕೆ ಬೇಕಾದ ಸಹಕಾರ ನೀಡಲಾಗುವುದು ಎಂದರು.

ಜಾಗೃತಿ ಕುರಿತು ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಗ್ರಾಪಂ ಅಧ್ಯಕ್ಷೆ ಶೋಭಾವತಿ ಮೇತ್ರೆ, ಉಪಾಧ್ಯಕ್ಷ ಸಂತೋಷ ಬಿರಾದಾರ, ಎಸ್‌ಡಿಎಂಸಿ ಅಧ್ಯಕ್ಷ ಯಶವಂತ ಪಾಟೀಲ್, ಪಿಡಿಒ ಚಂದ್ರಾಮ ಧೂಳಖೇಡ, ಐಇಸಿ ಸಂಯೋಜಕ ವೀರಾರೆಡ್ಡಿ, ಗ್ರಾಪಂ ಸದಸ್ಯರು, ಶಿಕ್ಷಕರು ಮತ್ತು ಮಕ್ಕಳು ಇದ್ದರು.