ಜಿಲ್ಲೆ

ಮನೆಗೆ ಮರಳಿದ ಹೈಸ್ಕೂಲ್ ವಿದ್ಯಾರ್ಥಿ

ಕಾರವಾರ: ಅಮ್ಮ ಬೈದಳು ಎಂಬ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದ ಹೈಸ್ಕೂಲ್ ವಿದ್ಯಾರ್ಥಿ ತಾನಾಗೇ ಮನೆಗೆ ಮರಳಿದ ಘಟನೆ ತಾಲೂಕಿನಲ್ಲಿ ನಡೆದಿದೆ.

ಆನ್​ಲೈನ್ ಕ್ಲಾಸ್ ಅಟೆಂಡ್ ಮಾಡುವಾಗ ಗೇಮ್ ಆಡುತ್ತಿದ್ದ ಎಂಬ ಕಾರಣಕ್ಕೆ ತಾಯಿ ಬೈದಿದ್ದಳು. ಇದರಿಂದ ಬೇಸರಗೊಂಡ ಬಾಲಕ ‘ನನಗೆ ನನ್ನದೇ ಆದ ಕನಸುಗಳಿವೆ. ನನ್ನನ್ನು ಹುಡುಕಬೇಕು. ನನ್ನನ್ನು ಹುಡುಕಲು ಮುಂದಾದರೆ ನಾನು ಸಾವಿಗೆ ಶರಣಾಗುತ್ತೇನೆ’ಎಂದು ನೋಟ್ ಬುಕ್​ನಲ್ಲಿ ಬರೆದಿಟ್ಟು ಶುಕ್ರವಾರ ತೆರಳಿದ್ದ. ಮನೆಯವರು ಆತಂಕಗೊಂಡು ಹುಡುಕಾಟ ನಡೆಸಿದ್ದರು. ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಬಾಲಕನ ಫೋಟೋದೊಡನೆ ಸಂದೇಶ ಹರಿದಾಡಿತ್ತು. ಆದರೆ, ಶನಿವಾರ ಆತನೇ ಮನೆಗೆ ವಾಪಸಾಗಿದ್ದಾನೆ.

ಇಲ್ಲಿಂದ ಬಸ್ ಹತ್ತಿ ಹುಬ್ಬಳ್ಳಿಗೆ ತೆರಳಿದ್ದ ಆತ ಅಲ್ಲಿನ ಲಾಡ್ಜ್ ಒಂದರಲ್ಲಿ ರೂಂ ಪಡೆದು ಉಳಿದಿದ್ದ. ಶನಿವಾರ ಬೆಳಗ್ಗೆ ಮನಸ್ಸು ಬದಲಿಸಿ ಮನೆಗೆ ಮರಳಿದ್ದಾನೆ.

ಶಿಕ್ಷಕಿ ಆತ್ಮಹತ್ಯೆ

ಜೊಯಿಡಾ: ಅನಾರೋಗ್ಯ ಕಾರಣದಿಂದ ಬೇಸತ್ತ ಶಿಕ್ಷಕಿಯೊಬ್ಬಳು ಮನೆಯ ಫ್ಯಾನ್​ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಬಿಕಾನಗರದಲ್ಲಿ ಶನಿವಾರ ನಡೆದಿದೆ. ನೀಲವ್ವ ಹಾಲಮಠ (58)ಮೃತರು. ಅಂಬಿಕಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯ ವ್ಯಸನಿಯ ಬಂಧನ

ಯಲ್ಲಾಪುರ: ಕುಡಿದು ಬಂದು ಪತ್ನಿ, ಮಗ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ವ್ಯಕ್ತಿಯನ್ನು ಯಲ್ಲಾಪುರ ಪೊಲೀಸರು ಕಿರವತ್ತಿಯಲ್ಲಿ ಶನಿವಾರ ಬಂಧಿಸಿದ್ದಾರೆ. ಕಿರವತ್ತಿಯ ಇಸ್ಲಾಂ ಗಲ್ಲಿಯ ಗೌಸಅಲಿ ಮದರ್ ಸಾಬ್ ಕಾನೋಜಿ ಬಂಧಿತ. ಈತ ಕುಡಿದು ಬಂದು ಪತ್ನಿ ಜೈತುನಬಿ, ಮಗ ಜುನೇದ ಹಾಗೂ ಮಗಳು ರಿಯಾನ್ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ.

ಈ ಕುರಿತು ಜೈತುನಬಿ ಗೌಸ್​ಅಲಿ ಕಾನೋಜಿ ಠಾಣೆಯಲ್ಲಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

EndFragment